ಬೆಂಗಳೂರು: ಮಂಡ್ಯದ ನೂತನ ಸಂಸದೆಯಾಗಿ ಸುಮಲತಾ ಅಂಬರೀಶ್ ಆಯ್ಕೆಯಾಗಿದ್ದು, ಜೆಡಿಎಸ್ ಕೆಲ ಶಾಸಕರು ಜಾಣತನದಿಂದ ಕಾವೇರಿ ನೀರಿನ ಜವಾಬ್ದಾರಿಯನ್ನು ಸುಮಲತಾರ ಹೆಗಲಿಗೆ ವರ್ಗಾಯಿಸಿದ್ದಾರೆ. ಇತ್ತ ನೂತನ ಸಂಸದೆಯಾಗಿರುವ ಸುಮಲತಾ ಸಹ ಯಾರಿಂದನೂ ಹೇಳಿಸಿಕೊಂಡು ಕೆಲಸ ಮಾಡೋದು ನನ್ನ ಜಾಯಮಾನವಲ್ಲ. ಮಂಡ್ಯ ರೈತರ ಅಭಿವೃದ್ಧಿಯೇ ನನ್ನ ಮೊದಲ ಕರ್ತವ್ಯ ಎಂದು ತಿರುಗೇಟು ನೀಡಿದ್ದಾರೆ. ರೈತರಿಗೆ ಕಾವೇರಿ ವಿಚಾರದಲ್ಲಿ ಸರ್ಕಾರ ಹಾಗೂ ಸುಮಲತಾ ಸಂಘರ್ಷ ಮುಂದುವರಿಯುವ ಭೀತಿ ಉಂಟಾಗಿದ್ದು, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೊಸ ಎಂಪಿಎ ಕಿವಿಮಾತು ಹೇಳಿದ್ದಾರೆ.
ಹೊಸ ಸಂಸದರಾಗಿರುವ ಸುಮಲತಾ ಅಂಬರೀಶ್ ತಮ್ಮ ಕರ್ತವ್ಯಗಳನ್ನು ಜ್ಞಾಪಿಸಿಕೊಳ್ಳಬೇಕು. ಕಾವೇರಿ ನದಿ ನೀರಿನ ವಿಚಾರ ಮತ್ತು ರೈತೆ ಸಮಸ್ಯೆಗಳತ್ತ ಸಂಸದರು ಹೆಚ್ಚು ಗಮನ ನೀಡಬೇಕು. ಸದ್ಯ ಕಾವೇರಿ ನಿರ್ವಹಣಾ ಮಂಡಳಿ ತಮಿಳುನಾಡಿಗೆ ಜೂನ್ ತಿಂಗಳ ನೀರು ಹರಿಸುವಂತೆ ಸೂಚಿಸಿದೆ. ಮಳೆ ಕೈ ಕೊಟ್ಟರೆ ಕರ್ನಾಟಕಕ್ಕೆ ತೊಂದರೆಯಾಗಲಿದೆ. ಅಂತಹ ಸಂದರ್ಭದಲ್ಲಿ ಲೋಕಸಭೆಯಲ್ಲಿ ಹೇಗೆ ಚರ್ಚಿಸಬೇಕು? ಪ್ರಧಾನಿಗಳನ್ನು ಭೇಟಿಯಾಗುವ ಸಂದರ್ಭ ಎದುರಾಗುತ್ತದೆ. ಹಾಗಾಗಿ ಮೊದಲ ಬಾರಿಗೆ ಸಂಸದರಾಗಿರುವ ಸುಮಲತಾ ಅವರು ಇಂತಹ ಕಠಿಣ ಸನ್ನಿವೇಶ ಎದುರಿಸಲು ಮೊದಲೇ ಸಿದ್ಧವಾಗಿರಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಸಲಹೆ ನೀಡಿದರು.
ಮಂಡ್ಯ ಭಾಗದಲ್ಲಿ ಚುನಾವಣೆ ಆರಂಭಗೊಂಡಾಗ ರಾಜಕೀಯ ಸಂಘರ್ಷ ತಾರಕಕ್ಕೆ ಹೋಗಿದ್ದನ್ನು ಗಮನಿಸಿದ್ದೇನೆ. ಚುನಾವಣೆಯ ಫಲಿತಾಂಶ ಬಂದಿದ್ದು, ಜನತೆ ನೀಡಿದ ತೀರ್ಪನ್ನು ಎಲ್ಲರು ಒಪ್ಪಿಕೊಳ್ಳಬೇಕು. ಈ ಸಂಘರ್ಷ ಮತ್ತು ವಾದ-ವಿವಾದಗಳನ್ನು ಎಲ್ಲರೂ ಮರೆತು ರಾಜ್ಯದ ಅಭಿವೃದ್ಧಿಯ ಕೆಲಸಗಳಲ್ಲಿ ಒಂದಾಗಬೇಕು ಎಂದು ತಿಳಿಸಿದರು.