ಇಂದು ನರೇಂದ್ರ ಮೋದಿ ಪ್ರಧಾನಿಯಾಗಿ ಪದಗ್ರಹಣ; ರಾಹುಲ್, ಸೋನಿಯಾ ಸೇರಿ 6 ಸಾವಿರಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸುವ ಸಾಧ್ಯತೆ

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಎನ್​ಡಿಎ ನಾಯಕ ನರೇಂದ್ರ ಮೋದಿ ಅವರು ಸತತ ಎರಡನೇ ಬಾರಿ ಪ್ರಧಾನಿಯಾಗಿ ಇವತ್ತು ಪದಗ್ರಹಣ ಮಾಡಲಿದ್ದಾರೆ. ಇಂದು ಸಂಜೆ 7ಗಂಟೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನೂತನ ಪ್ರಧಾನಿಗಳಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಇದೇ ವೇಳೆ, ಸಚಿವ ಸಂಪುಟದ ಕೆಲ ಸದಸ್ಯರೂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ನಡೆಯುವ ಈ ಪದಗ್ರಹಣ ಸಮಾರಂಭದಲ್ಲಿ ಸಾಕಷ್ಟು ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ. BIMSTEC ದೇಶಗಳ ಮುಖಂಡರಿಗೆ ಆಹ್ವಾನ ನೀಡಲಾಗಿದೆ. ಈಗಾಗಲೇ ಹಲವು ನಾಯಕರು ಭಾರತಕ್ಕೆ ಆಗಮಿಸಿದ್ದಾಗಿದೆ. ಹಾಗೆಯೇ, ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ವಿಪಕ್ಷಗಳ ಮುಖಂಡರಿಗೆ ಆಹ್ವಾನ ಕೊಡಲಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಗುಲಾಂ ನಬಿ ಆಜಾದ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಸಮಾರಂಭಕ್ಕೆ ಬರಲಿದ್ದಾರೆ.
ಪಿ.ಟಿ. ಉಷಾ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಹರ್ಭಜನ್ ಸಿಂಗ್, ಸೈನಾ ನೆಹ್ವಾಲ್, ಪಿ. ಗೋಪಿಚಂದ್, ದೀಪಾ ಕರ್ಮಾಕರ್ ಮೊದಲಾದ ಕ್ರೀಡಾ ಸಾಧಕರನ್ನು ಸಮಾರಂಭಕ್ಕೆ ಬರುವಂತೆ ಕೋರಲಾಗಿದೆ.

ರಜಿನಿಕಾಂತ್, ಕಂಗನಾ ರಾಣಾವತ್, ಶಾರುಕ್ ಖಾನ್, ಸಂಜಯ್ ಭನ್ಸಾಲಿ, ಕರಣ್ ಜೋಹರ್ ಮೊದಲಾದ ಸಿನಿ ಕ್ಷೇತ್ರದ ದಿಗ್ಗಜರು; ಮುಕೇಶ್ ಅಂಬಾನಿ, ಗೌತಮ್ ಅದಾನಿ, ರತನ್ ಟಾಟಾ, ಅಜಯ್ ಪಿರಾಮಲ್, ಜಾನ್ ಚೇಂಬರ್ಸ್, ಬಿಲ್ ಗೇಟ್ಸ್ ಮೊದಲಾದ ಉದ್ಯಮಿಗಳನ್ನೂ ಆಹ್ವಾನಿಸಲಾಗಿದೆ.

BIMSTEC ದೇಶಗಳ ಪೈಕಿ, ಬಾಂಗ್ಲಾ ಅಧ್ಯಕ್ಷ ಅಬ್ದುಲ್ ಹಮೀದ್, ಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ, ಮಯನ್ಮಾರ್ ಅಧ್ಯಕ್ಷ ವಿನ್ ಮಯಿಂಟ್, ಭೂತಾನ್ ಪ್ರಧಾನಿ ಲೋಟೇ ಶೆರಿಂಗ್ ಅವರು ಸಮಾರಂಭಕ್ಕೆ ಬರುವುದು ಖಚಿತವಾಗಿದೆ. ಥಾಯ್ಲೆಂಡ್, ಕಿರ್ಗಿಸ್ತಾನ್ ಮತ್ತು ಮಾಲ್ಡೀವ್ಸ್ ದೇಶಗಳಿಂದಲೂ ಪ್ರತಿನಿಧಿಗಳು ಬರುವ ನಿರೀಕ್ಷೆ ಇದೆ.

ಗೈರಾಗುವವರುಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೆಲ ‘ಭಿನ್ನಾಭಿಪ್ರಾಯ’ಗಳಿಂದಾಗಿ ಸಮಾರಂಭಕ್ಕೆ ಬರುತ್ತಿಲ್ಲವೆಂದು ಹೇಳಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ಬರುತ್ತಿಲ್ಲ. ಇನ್ನು, ಒಡಿಶಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಗೈರಾಗುತ್ತಿದ್ದಾರೆ.

ಒಡಿಶಾಗೆ ಬರುತ್ತೇನೆಂದು ಹೇಳಿದ್ದ ಪ್ರಧಾನಿ ತಮ್ಮ ಮಾತು ಉಳಿಸಿಕೊಳ್ಳದೇ ಹೋಗಿದ್ದು ಪಾಟ್ನಾಯಕ್ ನಿರ್ಧಾರಕ್ಕೆ ಕಾರಣವೆಂದು ಶಂಕಿಸಲಾಗಿದೆ. ಆದರೆ, ಒಡಿಶಾ ವಿಧಾನಸಭೆಯ ನೂತನ ಸದಸ್ಯರು ಇಂದೇ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ತಾವು ದೆಹಲಿಗೆ ಬರಲು ಸಾಧ್ಯವಿಲ್ಲ ಎಂದು ನವೀನ್ ಪಾಟ್ನಾಯಕ್ ಸ್ಪಷ್ಟಪಡಿಸಿದ್ದಾರೆ.

2014ರ ಚುನಾವಣೆಯಲ್ಲಿ ಗೆದ್ದ ಬಳಿಕ ಮೊದಲ ಬಾರಿಗೆ ಪ್ರಧಾನಿಯಾಗಿದ್ದ ನರೇಂದ್ರ ಮೋದಿ ಅವರು ಆಗ ಸಾರ್ಕ್ ರಾಷ್ಟ್ರಗಳ ಮುಖಂಡರನ್ನು ಪದಗ್ರಹಣ ಸಮಾರಂಭಕ್ಕೆ ಆಹ್ವಾನಿಸಿದ್ದರು. ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರೂ ಆಗಮಿಸಿದ್ದರು. ಈ ಬಾರಿ ಮೋದಿ ಅವರು ಪಾಕಿಸ್ತಾನವನ್ನು ದೂರ ಇಟ್ಟು ಉಳಿದ ದಕ್ಷಿಣ ಏಷ್ಯಾ ರಾಷ್ಟ್ರಗಳ ಮುಖಂಡರಿಗೆ ಅಹ್ವಾನ ಕೊಟ್ಟಿರುವುದು ಕುತೂಹಲ ಮೂಡಿಸಿದೆ. ಹಾಗೆಯೇ, ನೆರೆಯ ಚೀನಾ ದೇಶದವರನ್ನೂ ಮೋದಿ ಆಹ್ವಾನಿಸದೇ ಇರುವುದು ಗಮನಾರ್ಹವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ