ನವ ದೆಹಲಿ; ಎರಡನೇ ಅವಧಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಇಂದು ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ದೇಶ-ವಿದೇಶದ ಸುಮಾರು 6 ಸಾವಿರಕ್ಕೂ ಅಧಿಕ ಗಣ್ಯರು ದೆಹಲಿಗೆ ಆಗಮಿಸಿದ್ದಾರೆ. ಆದರೆ, ಮೋದಿ ಪ್ರಮಾಣ ವಚನ ಸಂಭ್ರಮ ಒಂದೆಡೆಯಾದರೆ ಮತ್ತೊಂದೆಡೆ ಸಚಿವ ಸ್ಥಾನಕ್ಕಾಗಿ ರಾಜ್ಯ ಸಂಸದರ ಎದೆಯಲ್ಲಿ ಢವ ಢವ ಶುರುವಾಗಿದೆ.
ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ನೂತನ ಸಚಿವರ ಪಟ್ಟಿಯನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸಲಾಗುತ್ತದೆ. ಆದರೆ, ಕೇಂದ್ರ ಸಚಿವ ಸಂಪುಟದಲ್ಲಿ ಯಾರ್ಯಾರು ಇರಲಿದ್ದಾರೆ? ಯಾರ್ಯಾರಿಗೆ ಯಾವ ಖಾತೆ ನೀಡಲಾಗಿದೆ? ರಾಜ್ಯದಲ್ಲಿ ಎಷ್ಟು ಜನರಿಗೆ ಸಚಿವ ಸ್ಥಾನ ನೀಡಲಾಗಿದೆ? ಎಂಬ ಕುರಿತ ಅಂಶಗಳನ್ನು ಈವರೆಗೆ ಗೌಪ್ಯವಾಗಿಡಲಾಗಿದೆ. ಹೀಗಾಗಿ ರಾಜ್ಯದಲ್ಲೂ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು, ಯಾರ್ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಕುರಿತು ಬಹುತೇಕ ಎಲ್ಲಾ ಸಂಸದರು ಹೈಕಮಾಂಡ್ ಫೋನ್ ಕರೆಗಾಗಿ ಕಾದು ಕುಳಿತಿದ್ದಾರೆ ಎನ್ನಲಾಗುತ್ತಿದೆ.
ಸಚಿವ ಸ್ಥಾನ ಮತ್ತು ಲೆಕ್ಕಾಚಾರ; ರಾಜ್ಯದಲ್ಲಿ 25 ಜನ ಬಿಜೆಪಿ ಸಂಸದರಿದ್ದಾರೆ. ಎಲ್ಲರಿಗೂ ಸಚಿವ ಸ್ಥಾನದ ಮೇಲೆ ಕಣ್ಣಿದೆ. ಆದರೆ, ರಾಜ್ಯದಲ್ಲಿ ಈಗಾಗಲೇ ಯಾರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ?ಎಂಬ ಲೆಕ್ಕಾಚಾರಗಳು ಆರಂಭವಾಗಿದ್ದು, ಜಾತಿ, ಅನುಭವ ಹಾಗೂ ಪ್ರದೇಶಾವಾರು ಮಾನದಂಡಗಳ ಮೇಲೆ ಸಚಿವ ಸ್ಥಾನ ಯಾರಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ.
ಲಿಂಗಾಯತ ಕೋಟಾದ ಅಡಿಯಲ್ಲಿ ಸುರೇಶ್ ಅಂಗಡಿ ಅಥವಾ ಪಿ.ಸಿ. ಗದ್ದಿಗೌಡರ, ದಲಿತ ಕೋಟಾ ಅಡಿಯಲ್ಲಿ ರಮೇಶ್ ಜಿಗಜಿಣಗಿ ಅಥವಾ ಉಮೇಶ್ ಜಾಧವ್ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಲೆಕ್ಕಾಚಾರ ಮಾಡಲಾಗುತ್ತಿದೆ. ಇದಲ್ಲದೆ ಬ್ರಾಹ್ಮಣ ಕೋಟಾ ಅಡಿಯಲ್ಲಿ ಪ್ರಗ್ಲಾದ್ ಜೋಶಿ ಅಥವಾ ಅನಂತಕುಮಾರ್ ಹೆಗಡೆ, ಒಕ್ಕಲಿಗರ ಕೋಟಾ ಅಡಿಯಲ್ಲಿ ಸದಾನಂದಗೌಡ ಅಥವಾ ಶೋಭಾ ಕರಂದ್ಲಾಜೆ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎನ್ನಲಾಗುತ್ತದೆ.
ಈ ನಡುವೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪ್ರಧಾನಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನವೇ ಸಂಭಾವ್ಯ ಸಚಿವರಿಗೆ ಚಹಾ ಕೂಟವನ್ನು ಏರ್ಪಡಿಸಿರುವುದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಒಟ್ಟಾರೆ ಇನ್ನೂ ಕೆಲವೇ ಗಂಟೆಗಳಲ್ಲಿ ನೂತನ ಸಚಿವರ ಪಟ್ಟಿ ರಾಷ್ಟ್ರಪತಿ ಭವನಕ್ಕೆ ತಲುಪಲಿದ್ದು, ರಾಜ್ಯದ ಯಾವ ಸಂಸದರಿಗೆ ಸಚಿವ ಸ್ಥಾನ ಲಭಿಸಿದೆ? ಯಾವ ಖಾತೆ ನೀಡಲಾಗಿದೆ? ಎಂಬ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.
ನಾನೂ ಸಚಿವ ಸ್ಥಾನದ ಆಕಾಂಕ್ಷಿ–ಜಿ.ಎಸ್. ಬಸವರಾಜು; ನಾನು ಸಹ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನದ ಆಕಾಂಕ್ಷಿ. ಆದರೆ, ಈವರೆಗೆ ಯಾರಿಂದಲೂ ಈ ಕುರಿತ ಭರವಸೆ ಸಿಕ್ಕಿಲ್ಲ ಎಂದು ತುಮಕೂರು ಸಂಸದ ಜಿ.ಎಸ್. ಬಸವರಾಜ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನದ ಕುರಿತು ಯಡಿಯೂರಪ್ಪನವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ಆದರೆ, ಅವರಿಂದಲೂ ಭರವಸೆ ಸಿಕ್ಕಿಲ್ಲ. ಹೆಚ್ಚು ಜನ ಗೆದ್ದಿರುವುದರಿಂದ ಸಚಿವ ಸ್ಥಾನ ನೀಡುವ ವಿಚಾರವನ್ನು ಗುಟ್ಟಾಗಿ ಇಡಲಾಗಿದೆ. ಅಂತಿಮವಾಗಿ ಸಚಿವ ಸ್ಥಾನ ನೀಡುವುದು ಪ್ರಧಾನಿಗಳಿಗೆ ಬಿಟ್ಟ ವಿಚಾರ ಎಂದು ಅವರು ತಿಳಿಸಿದ್ದಾರೆ.