
ಹೊಸದಿಲ್ಲಿ : 2 ನೇ ಬಾರಿಗೆ ಇಂದು ಗುರುವಾರ ಪ್ರಮಾಣವಚನ ಸ್ವೀಕರಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕ,ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೆಯಿ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.
ಯುದ್ಧ ಸ್ಮಾರಕಕ್ಕೆ ತೆರಳಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ಗೌರವ ನಮನ ಸಲ್ಲಿಸಿದರು. ಪ್ರಧಾನಿ ಮೋದಿ ಅವರೊಂದಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಭೂ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ನೌಕಾಪಡೆಯ ಅಡ್ಮಿರಲ್ ಸುನೀಲ್ ಲಾಂಬಾ, ವಾಯುಪಡೆಯ ಏರ್ ಮಾರ್ಷಲ್ ಆರ್.ಕೆ.ಎಸ್.ಬದೌರಿಯಾ ಅವರು ಜೊತೆಯಲ್ಲಿದ್ದರು.
ರಾಷ್ಟ್ರಪತಿ ಭವನದಲ್ಲಿ ಸಂಜೆ 7 ಗಂಟೆಗೆ 68 ರ ಹರೆಯದ ನರೇಂದ್ರ ಮೋದಿ ಅವರು 2 ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಪ್ರಧಾನಿ ಮೋದಿ ಅವರೊಂದಿಗೆ ಬಿಜೆಪಿಯ 50 ರಿಂದ 60 ಮಂದಿ ಮತ್ತು ಮೈತ್ರಿಕೂಟದ 8 ರಿಂದ 10 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿಲಿದ್ದಾರೆಎಂದು ತಿಳಿದು ಬಂದಿದೆ.
543 ಸ್ಥಾನಗಳ ಪೈಕಿ 303 ಸ್ಥಾನಗಳನ್ನು ಗೆದ್ದ ಬಿಜೆಪಿ , ಮೈತ್ರಿಕೂಟದೊಂದಿಗೆ 353 ಸ್ಥಾನಗಳನ್ನು ಗೆಲ್ಲುವ ಮೂಲಕ ಅಭೂತಪೂರ್ವ ಗೆಲುವು ಪಡೆದಿತ್ತು.