ಬೆಂಗಳೂರು, ಮೇ 30- ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಜ್ಯ ಸರ್ಕಾರ ಪ್ರತಿ ಯೂನಿಟ್ಗೆ 33 ಪೈಸೆ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಬರಗಾಲದಲ್ಲೇ ಜನತೆಗೆ ಬರೆ ಎಳೆದಿದೆ.
ಬೆಸ್ಕಾಂ, ಚೆಸ್ಕಾಂ, ಹೆಸ್ಕಾಂ, ಮೆಸ್ಕಾಂ ಮತ್ತು ಜೆಸ್ಕಾಂ ಒಟ್ಟು ಐದು ವಿದ್ಯುತ್ ಪೂರೈಕೆ ಮಾಡುವ ಕಂಪೆನಿಗಳ ಪ್ರತಿ ಯೂನಿಟ್ಗೆ 33 ಪೈಸೆ ದರವನ್ನು ಇಂದಿನಿಂದಲೇ ಜಾರಿಯಾಗುವಂತೆ ಪರಿಷ್ಕರಣೆಯಾಗಿದೆ.
ಕರ್ನಾಟಕ ವಿದ್ಯುತ್ ಸುಧಾರಣ ಆಯೋಗದ ಅಧ್ಯಕ್ಷ ಶಂಭುದಯಾಳ್ ಮೀನಾ ಅವರು ಇಂದು ನೂತನ ದರವನ್ನು ಪ್ರಕಟಿಸಿದರು.
ಇದರ ಪ್ರಕಾರ ಬೆಂಗಳೂರು ವ್ಯಾಪ್ತಿಯ ಬೆಸ್ಕಾಂ, ಮೈಸೂರು ವ್ಯಾಪ್ತಿಯ ಚೆಸ್ಕಾಂ, ಮಂಗಳೂರು ವ್ಯಾಪ್ತಿಯ ಮೆಸ್ಕಾ, ಹುಬ್ಬಳ್ಳಿ ವ್ಯಾಪ್ತಿಯ ಹೆಸ್ಕಾಂ ಹಾಗೂ ಕಲಬುರ್ಗಿ ವ್ಯಾಪ್ತಿಯ ಜೆಸ್ಕಾಂ ವ್ಯಾಪ್ತಿಯ ಐದು ಕಂಪೆನಿಗಳಲ್ಲಿ ನೂತನ ದರ ಪರಿಷ್ಕರಣೆಯಾಗಿದೆ.
ವಿದ್ಯುತ್ ಪೂರೈಕೆ ಮಾಡುವ ಕಂಪೆನಿಗಳು ಸತತ ನಷ್ಟದಲ್ಲಿರುವ ಕಾರಣ ಹಳಿಗೆ ತರಲು ವಿದ್ಯುತ್ ದರವನ್ನು ಏರಿಸಬೇಕೆಂದು ಐದು ಕಂಪೆನಿಗಳ ಮುಖ್ಯಸ್ಥರು ಕೆಇಆರ್ಸಿಗೆ ಪ್ರಸ್ತಾವನೆ ಸಲ್ಲಿಸಿದ್ದವು.
ಬೆಂಗಳೂರು ವ್ಯಾಪ್ತಿಯಲ್ಲಿ ಕಳೆದ ವರ್ಷ 2,932.24 ಕೋಟಿ, ಮಂಗಳೂರು ವ್ಯಾಪ್ತಿಯಲ್ಲಿ 706.39, ಚಾಮುಂಡೇಶ್ವರಿ ವ್ಯಾಪ್ತಿಯಲ್ಲಿ 630.75, ಹುಬ್ಬಳ್ಳಿ ವ್ಯಾಪ್ತಿಯಲ್ಲಿ 1,980.09 ಹಾಗೂ ಕಲಬುರ್ಗಿ ವ್ಯಾಪ್ತಿಯಲ್ಲಿ 964.41 ಕೋಟಿ ಸೇರಿದಂತೆ ಒಟ್ಟು ವಿದ್ಯುತ್ ಕಂಪೆನಿಗಳಿಗೆ 7,217.88 ಕೋಟಿ ನಷ್ಟವಾಗಿತ್ತು.
ಈ ಹಿನ್ನೆಲೆಯಲ್ಲಿ ಹೆಸ್ಕಾಂ ಕಂಪೆನಿಯು ಪ್ರತಿ ಯೂನಿಟ್ಗೆ 1.63 ಪೈಸೆ, ಮೆಸ್ಕಾಂ 1.38, ಚೆಸ್ಕಾಂ 1 ರೂ., ಜೆಸ್ಕಾಂ 1.27 ಪೈಸೆ ಏರಿಕೆ ಮಾಡುವಂತೆ ಕೆಇಆರ್ಸಿಗೆ ಪ್ರಸ್ತಾವನೆ ಸಲ್ಲಿಸಿತ್ತು.
ನಿಯಮದಂತೆ ವಿದ್ಯುತ್ ದರ ಪರಿಷ್ಕರಣೆ ಮಾಡುವ ಮುನ್ನ ಕೆಇಆರ್ಸಿ ಸಾರ್ವಜನಿಕರಿಂದ ದೂರುಗಳನ್ನು ಆಲಿಸುತ್ತದೆ. ಅಲ್ಲಿ ವ್ಯಕ್ತವಾಗುವ ಸಾಧಕ-ಬಾಧಕಗಳನ್ನು ಪರಿಗಣಿಸಿ ಅಂತಿಮವಾಗಿ ವಿದ್ಯುತ್ ಕಂಪೆನಿ ಮತ್ತು ಸಾರ್ವಜನಿಕರಿಗೆ ಹೊರೆಯಾಗದಂತೆ ಸಮತೋಲನದ ದರವನ್ನು ಏರಿಕೆ ಮಾಡುವುದು ವಾಡಿಕೆಯಾಗಿದೆ.
ದರ ಏರಿಕೆ ಅನಿವಾರ್ಯ:
ಹೊಸ ಉಷ್ಣವಿದ್ಯುತ್ ಕೇಂದ್ರಗಳಿಂದ ಖರೀದಿಸುವ ನವೀಕರಿಸಬಹುದಾದ ಇಂಧನಗಳ ಬೆಲೆ ಏರಿಕೆಯಾಗಿರುವುದರಿಂದ ದರ ಏರಿಸುವುದು ಅನಿವಾರ್ಯ ಎಂದು ಕೆಇಆರ್ಸಿ ಸಮರ್ಥಿಸಿಕೊಂಡಿದೆ.
ನೌಕರರ ವೇತನ ಪರಿಷ್ಕರಣೆ, ಹಾಗೂ ನಿರ್ವಹಣಾ ವೆಚ್ವದಲ್ಲಿ ಶೇ.20ರಷ್ಟು ಏರಿಕೆಯಾಗಿರುವುದು, ಬಡ್ಡಿ ಮತ್ತು ಹಣಕಾಸು ವೆಚ್ಚದಲ್ಲಿ ಶೇ.12ರಷ್ಟು ಏರಿಕೆ, 2017-18ನೇ ಸಾಲಿನಲ್ಲಿ 2192.33 ಕೋಟಿ ರೂ.ಗಳು ನಷ್ಟವಾಗಿರುವುದರಿಂದ ಸರಿದೂಗಿಸಲು ಅನಿವಾರ್ಯವಾಗಿ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದರು.
ಹೊಸ ದರದ ಪ್ರಮುಖ ಅಂಶಗಳು:
ನೂತನ ದರದಂತೆ ಗ್ರಾಹಕರಿಗೆ ವಿಶೇಷ ಯೋಜನೆಯನ್ನು ಈ ಬಾರಿಯೂ ಮುಂದುವರೆಸಲಾಗಿದೆ. ಇದರಂತೆ ಹೆಚ್ಟಿ ಗ್ರಾಹಕರಿಗೆ ಮೂಲ ಬಳಕೆಗಿಂತ ಹೆಚ್ಚಾಗಿ 10 ಗಂಟೆಯಿಂದ 18ಗಂಟೆ ಸಮಯದಲ್ಲಿ ಬಳಸಿದ ವಿದ್ಯುತ್ಚ್ಛಕ್ತಿ ಪ್ರತಿ ಯೂನಿಟ್ಗೆ 1ರೂ.ನಂತೆ ಪ್ರೊತ್ಸಾಹ ಧನ ನೀಡಲಾಗುವುದು.
ರಾತ್ರಿ ವೇಳೆ ಅಂದರೆ 12ಗಂಟೆಯಿಂದ 6ಗಂಟೆಗಳ ಸಮಯದಲ್ಲಿ ಎಲ್ಲಾ ವಿದ್ಯುತ್ಚ್ಛಕ್ತಿ ಬಳಕೆ ಪ್ರತಿಯೂನಿಟ್ಗೆ 2ರೂ. ಪ್ರೊತ್ಸಾಹ ಧನ ಸಿಗಲಿದೆ. 6ಗಂಟೆಯಿಂದ 10 ಗಂಟೆಯವರೆಗಿನ ಬೆಳಗಿನ ಗರಿಷ್ಠ ಸಮಯ ಮತ್ತು 18 ಗಂಟೆಯಿಂದ 22 ಗಂಟೆವರೆಗೆ ಸಾಯಂಕಾಲದ ಗರಿಷ್ಠ ಸಮಯದಲ್ಲಿ ವಿದ್ಯುತ್ಚ್ಛಕ್ತಿ ಬಳಕೆಗೆ ದರವನ್ನು ಒಂದು ರೂ. ದಂಡ ವಿಧಿಸುವ ನಿಯಮ ಮುಂದುವರೆಯಲಿದೆ.
ಬೆಂಗಳೂರು ಮೆಟ್ರೋ ಪ್ರತಿ ಯೂನಿಟ್ಗೆ 5.20 ಪೈಸೆಯಂತೆ ರಿಯಾಯ್ತಿ ದರ ನೀಡಲು ಆಯೋಗ ಅನುಮತಿ ನೀಡಲು ನಿರ್ಧಾರ ಮಾಡಿದೆ.