ಎನ್‍ಡಿಎ ಸರ್ಕಾರದಲ್ಲಿ ರಾಜ್ಯಕ್ಕೆ ಬಂಪರ್ ಕೊಡುಗೆ

ಬೆಂಗಳೂರು, ಮೇ 30- ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರದಲ್ಲಿ ಕರ್ನಾಟಕಕ್ಕೆ ಬಂಪರ್ ಕೊಡುಗೆ ದಕ್ಕಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟಕ್ಕೆ ರಾಜ್ಯದಿಂದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ.ಸದಾನಂದಗೌಡ, ಧಾರವಾಡ ಲೋಕಸಭಾ ಕ್ಷೇತ್ರದ ಸಂಸದ ಪ್ರಹ್ಲಾದ್‍ಜೋಶಿ ಹಾಗೂ ಬೆಳಗಾವಿ ಸಂಸದ ಸುರೇಶ್ ಅಂಗಡಿ ಅವರು ಸಂಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ರಾಜ್ಯಸಭಾ ಕೋಟಾದಲ್ಲಿ ಕರ್ನಾಟಕದಿಂದಲೇ ನಿರ್ಮಲಾ ಸೀತಾರಾಮನ್ ಸಂಪುಟಕ್ಕೆ ಸೇರ್ಪಡೆ ಯಾಗುತ್ತಿರುವುದರಿಂದ ಈ ಬಾರಿ ನಾಲ್ವರು ಸಚಿವರಾಗುವ ಅದೃಷ್ಟ ಪಡೆದಿದ್ದಾರೆ.

ಇದರಲ್ಲಿ ಸದಾನಂದಗೌಡ, ನಿರ್ಮಲಾ ಸೀತಾರಾಮನ್ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದರು. ಈ ಇಬ್ಬರು ಸಂಪುಟ ದರ್ಜೆಯ ಸಚಿವರಾಗಲಿದ್ದಾರೆ.

ಉಳಿದಂತೆ ಮೊದಲ ಬಾರಿಗೆ ಸಂಪುಟಕ್ಕೆ ಸೇರ್ಪಡೆಯಾಗುತ್ತಿರುವ ಪ್ರಹ್ಲಾದ್‍ಜೋಶಿ ಮತ್ತು ಸುರೇಶ್‍ಅಂಗಡಿ ರಾಜ್ಯ ಖಾತೆ ಸಚಿವರಾಗುವ ನಿರೀಕ್ಷೆ ಇದೆ.

ಈಗಾಗಲೇ ಪ್ರಧಾನಿ ಕಾರ್ಯಾಲಯದಿಂದ ಸಂಜೆ ನಡೆಯುವ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಬೇಕೆಂದು ಈ ನಾಲ್ವರನ್ನು ಆಹ್ವಾನಿಸಲಾಗಿದೆ.

ನರೇಂದ್ರ ಮೋದಿ ಅವರು ತಮ್ಮ ಸಂಪುಟಕ್ಕೆ ಪ್ರಾದೇಶಿಕತೆ, ಹಿರಿತನ, ಪಕ್ಷಕ್ಕೆ ಸಲ್ಲಿಸಿರುವ ಸೇವೆಯನ್ನು ಮಾನದಂಡವಾಗಿಟ್ಟುಕೊಂಡೇ ಸಚಿವರನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಸದಾನಂದಗೌಡ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗಿದೆ. ಬೆಂಗಳೂರು ಕೇಂದ್ರ ಮತ್ತು ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಿತ್ತು.

ಇನ್ನು ಉತ್ತರ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಭಾಗವನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ಬಿಜೆಪಿ ತೆಗೆದುಕೊಂಡ ಹಿನ್ನೆಲೆಯಲ್ಲಿ ಈ ಭಾಗದ ಇಬ್ಬರಿಗೆ ಸಂಪುಟದಲ್ಲಿ ಪ್ರಾಶಸ್ತ್ಯ ನೀಡಲಾಗಿದೆ.

ಈ ಬಾರಿಯ ಚುನಾವಣೆಯಲ್ಲಿ ಲಿಂಗಾಯಿತ ಸಮುದಾಯ ಬಿಜೆಪಿಗೆ ದೊಡ್ಡಮಟ್ಟದಲ್ಲಿ ಬೆಂಬಲಕ್ಕೆ ನಿಂತ ಪರಿಣಾಮ ಆ ಸಮುದಾಯದಿಂದ ಸುರೇಶ್ ಅಂಗಡಿ, ಬ್ರಾಹ್ಮಣ ಸಮುದಾಯದಿಂದ ಪ್ರಹ್ಲಾದ್ ಜೋಶಿಗೆ ಮಣೆ ಹಾಕಲಾಗಿದೆ.

ಒಕ್ಕಲಿಗ ಕೋಟಾದಿಂದ ಸದಾನಂದಗೌಡರು ಕೇಂದ್ರದಲ್ಲಿ ಎರಡನೇ ಬಾರಿಗೆ ಸಚಿವರಾಗಿದ್ದಾರೆ. ಮಹಿಳಾ ಕೋಟಾದಲ್ಲಿ ಚಿಕ್ಕಮಗಳೂರು- ಉಡುಪಿ ಸಂಸದೆ ಶೋಭಾಕರಂದ್ಲಾಜೆ ಸಚಿವರಾಗಬಹುದೆಂಬ ನಿರೀಕ್ಷೆ ಇತ್ತು. ಆದರೆ, ನಿರ್ಮಲಾ ಸೀತಾರಾಮನ್ ಕರ್ನಾಟಕದ ರಾಜ್ಯಸಭೆಯಿಂದಲೇ ಆಯ್ಕೆಯಾಗಿದ್ದಾರೆ. ಅಲ್ಲದೆ, ಕಳೆದ ಬಾರಿ ರಕ್ಷಣಾ ಸಚಿವರಾಗಿ ಅವರು ನಿರ್ವಹಿಸಿದ ಕೆಲಸಕ್ಕೆ ಎಲ್ಲರಿಂದಲೂ ಪ್ರಶಸಂಸೆಗೆ ವ್ಯಕ್ತವಾಗಿತ್ತು. ಹೀಗಾಗಿ ಕೊನೆ ಕ್ಷಣದಲ್ಲಿ ಅವರಿಗೆ ಮಂತ್ರಿಸ್ಥಾನ ಕೈ ತಪ್ಪಿದೆ ಎನ್ನಲಾಗುತ್ತಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದಿಂದ ಚಾಮರಾಜನಗರ ಸಂಸದ ವಿ.ಶ್ರೀನಿವಾಸ್‍ಪ್ರಸಾದ್, ವಿಜಯಪುರದ ರಮೇಶ್‍ಜಿಗಜಿಣಗಿ, ಕಲಬುರ್ಗಿಯ ಡಾ.ಉಮೇಶ್ ಜಾಧವ್ ಹೆಸರು ಕೇಳಿ ಬಂದಿದೆ.

ಹಿಂದುಳಿದ ವರ್ಗಗಳ ಸಮುದಾಯದಿಂದ ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದರು. ಅಂತಿಮವಾಗಿ ಕೊನೆ ಕ್ಷಣದಲ್ಲಿ ಒಂದಿಬ್ಬರಿಗೆ ಅದೃಷ್ಟ ಹೊಡೆದರೂ ಅಚ್ಚರಿಯಿಲ್ಲ.

2014ರಲ್ಲಿ ಮೋದಿ ಸಂಪುಟಕ್ಕೆ ಕರ್ನಾಟಕದಿಂದ ಎಚ್.ಎನ್.ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ, ರಮೇಶ್‍ಜಿಗಜಿಣಗಿ, ಅನಂತ್‍ಕುಮಾರ್ ಹೆಗಡೆ ಹಾಗೂ ನಿರ್ಮಲಾ ಸೀತಾರಾಮನ್ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ