ಬೆಂಗಳೂರು, ಮೇ. 29- ರಾಜ್ಯದ ಮಿನಿ ಮಹಾಸಮರಯೆಂದೇ ಬಿಂಬಿತವಾಗಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಇಂದು ಬೆಳಿಗ್ಗೆಯಿಂದ ಮತದಾನ ಆರಂಭವಾಗಿದ್ದು, ಬಹುತೇಕ ಶಾಂತಿಯುತವಾಗಿ ನಡೆಯುತ್ತಿದೆ.
ಸೂಕ್ತ ಪೊಲೀಸ್ ಭದ್ರತೆಯೊಂದಿಗೆ ಬೆಳಿಗ್ಗೆ 7ಗಂಟೆಗೆ ಆರಂಭವಾಗಿರುವ ಮತದಾನ ಸಂಜೆ 5ಗಂಟೆ ವರೆಗೂ ನಡೆಯಲಿದ್ದು, ಮತ ಎಣಿಕೆ ಮೇ 31ರಂದು ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ.
8ನಗರಸಭೆಯ 247 ವಾರ್ಡ್, 33ಪುರಸಭೆಯ 734 ವಾರ್ಡ್, 22ಪಟ್ಟಣಪಂಚಾಯ್ತಿಯ 315 ವಾರ್ಡ್ಗಳು ಸೇರಿದಂತೆ 63 ನಗರ ಸ್ಥಳೀಯ ಸಂಸ್ಥೆಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಮತದಾನ ನಡೆಯುವ ಪ್ರದೇಶದಲ್ಲಿ ರಾಜ್ಯ ಚುನಾವಣಾ ಆಯೋಗ ರಜೆ ಘೋಷಿಸಿದೆ.
61 ಸ್ಥಳೀಯ ಸಂಸ್ಥೆಗಳ ಒಟ್ಟು 1326 ವಾರ್ಡ್ಗಳ ಪೈಕಿ 30ವಾರ್ಡ್ಗಳಲ್ಲಿ ಈಗಾಗಲೇ ಅವಿರೋಧ ಆಯ್ಕೆಯಾಗಿದೆ. 1296 ವಾರ್ಡ್ಗಳಿಗೆ ಮತದಾನ ನಡೆಯುತ್ತಿದ್ದು, 4260ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
14.79ಲಕ್ಷ ಮತದಾರರು ಈ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ 1224 ಕಾಂಗ್ರೆಸ್, 1125 ಬಿಜೆಪಿ, 780 ಜೆಡಿಎಸ್, 1156 ಪಕ್ಷೇತರ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಬೆಂಗಳೂರು ಮಹಾನಗರ ಪಾಲಿಕೆಯ 2ವಾರ್ಡ್ಗಳಾದ ಹೆಬ್ಬಗೋಡಿ ಪುರಸಭೆಯ ಒಂದು ಸದಲಗಾ, ಮುಗಳಕೋಡ್ ಪುರಸಭೆ ತಲಾ ಒಂದು ವಾರ್ಡ್ಗೆ ಉಪಚುನಾವಣೆ ನಡೆಯುತ್ತಿದ್ದು, ಒಟ್ಟು 32 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
8 ತಾಲೂಕು ಪಂಚಾಯ್ತಿಯ 9 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಒಟ್ಟು 25 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಬೆಂಗಳೂರು ಗ್ರಾಮಾಂತರ ಹಾಗೂ ಶಿವಮೊಗ್ಗ ಜಿಲ್ಲೆಯ ಸ್ಥಳೀಯ ಸಂಸ್ಥೆಯ ಮತ ಎಣಿಕೆಯನ್ನು ಜೂ. 3ರಂದು ನಡೆಸಲು ನಿರ್ಧರಿಸಿದೆ.