ಬೆಂಗಳೂರು, ಮೇ. 29- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ಕಾಂಗ್ರೆಸ್ ಕೈಗೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿದೆ. ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಗೆ ಜೆಡಿಎಸ್ ಸಿದ್ಧವಾಗಿದ್ದು, ಕಾಂಗ್ರೆಸ್ ಕೈಗೊಳ್ಳುವ ನಿರ್ಧಾರವನ್ನು ಎದುರು ನೋಡಲಾಗುತ್ತಿದೆ. ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್ ನಾಯಕರು ಸರಣಿ ಸಭೆಗಳನ್ನು ನಡೆಸಿದ್ದಾರೆ. ಜೆಡಿಎಸ್ ನಾಯಕರು ಕೂಡ ಕಾಂಗ್ರೆಸ್ ನಾಯಕರೊಂದಿಗೆ ಈ ವಿಚಾರ ಕುರಿತಂತೆ ಸಮಾಲೋಚನೆ ನಡೆಸುತ್ತಲೇ ಇದ್ದಾರೆ.
ಆಡಳಿತ ಪಕ್ಷದ ಅತೃಪ್ತ ಶಾಸಕರು ಪಕ್ಷಾಂತರಗೊಳ್ಳುವುದನ್ನು ತಡೆದು ಸರ್ಕಾರವನ್ನು ಸುಭದ್ರಗೊಳಿಸಲು ಅಗತ್ಯವಿರುವ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಮೂಲಕ ಅತೃಪ್ತರನ್ನು ಸಮಾಧಾನಪ ಡಿಸುವ ಪ್ರಯತ್ನ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಉಭಯ ಪಕ್ಷಗಳ ನಡುವಿನ ಮಾತುಕತೆಗಳು ಮುಂದುವರಿದ್ದು, ಕಾಂಗ್ರೆಸ್ ಕೈಗೊಳ್ಳುವ ನಿರ್ಧಾರದ ಮೇಲೆ ಮೈತ್ರಿ ಸರ್ಕಾರದ ಭವಿಷ್ಯ ನಿಂತಿದೆ.
ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಭಾರೀ ಹಿನ್ನಡೆಯನ್ನು ಮಿತ್ರ ಪಕ್ಷಗಳು ಅನುಭವಿಸಿದ್ದು, ರಾಜ್ಯದ ಮೈತ್ರಿ ಸರ್ಕಾರವನ್ನು ಸುಭದ್ರಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್-ಜೆಡಿಎಸ್ ನಾಯಕರು ಮಾತುಕತೆ ಮುಂದುವರೆಸಿದ್ದಾರೆ.
ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನರ್ರಚನೆ ಬಗ್ಗೆ ನಿರಂತರವಾಗಿ ಸಮಾಲೋಚನೆಗಳು ನಡೆಯುತ್ತಿದ್ದು, ಈತನಕ ಅಂತಿಮ ಸ್ವರೂಪ ಪಡೆದಿಲ್ಲ. ಕಳೆದ ಒಂದು ವಾರದಿಂದಲೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಉಭಯ ಪಕ್ಷಗಳ ನಾಯಕರು ಸರ್ಕಾರವನ್ನು ಉಳಿಸಿಕೊಳ್ಳುವ, ಸಂಪುಟವನ್ನು ವಿಸ್ತರಣೆ ಮಾಡುವ ಗಂಭೀರ ಚರ್ಚೆ ನಡೆಸುತ್ತಿದ್ದಾರೆ.
ಅತೃಪ್ತ ಕಾಂಗ್ರೆಸ್ ಶಾಸಕರನ್ನು ಸಮಾಧಾನಪಡಿಸಲು ಸಚಿವ ಸ್ಥಾನವನ್ನು ನೀಡುವ ಭರವಸೆಯನ್ನು ನೀಡಲಾಗುತ್ತಿದೆ. ಉಭಯ ಎರಡು ಪಕ್ಷಗಳ ನಾಯಕರು ಅತೃಪ್ತರೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಸೂಕ್ತ ಸ್ಥಾನ ನೀಡಿ ಸಮಾಧಾನ ಪಡಿಸುವ ಪ್ರಯತ್ನ ಮಾಡಲಾಗುತ್ತಿದೆ.
ಕಾಂಗ್ರೆಸ್ ಜೆಡಿಎಸ್ ನಲ್ಲಿ ಕೆಲವರು ಸರ್ಕಾರದ ಉಳಿವಿಗಾಗಿ ಸಚಿವ ಸ್ಥಾನ ಬಿಟ್ಟುಕೊಡಲು ಸಿದ್ಧರಿರುವ ಹಿನ್ನೆಲೆಯಲ್ಲಿ ಸಂಪುಟ ಪುನರ್ ರಚನೆ ಮಾಡಲು ಉದ್ದೇಶಿಸಿಲಾಗಿತ್ತು. ಆದರೆ ಕಾಂಗ್ರೆಸ್ನ ಕೆಲ ಸಚಿವರು ಸಹಮತ ವ್ಯಕ್ತಪಡಿಸದ ಕಾರಣ ಖಾಲಿ ಇರುವ ಮೂರು ಸಚಿವ ಸ್ಥಾನಗಳನ್ನು ಮೊದಲಿಗೆ ಭರ್ತಿ ಮಾಡಿ ಆ ನಂತರ ಸಂಪುಟ ಪುನರ್ ರಚನೆ ಮಾಡಲು ಉಭಯ ಪಕ್ಷದ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇಂದು ಕಾಂಗ್ರೆಸ್ನ ಶಾಸಕಾಂಗ ಪಕ್ಷ ಸಭೆ ನಡೆಯಲಿದ್ದು, ಆ ನಂತರ ಸಂಪುಟ ವಿಸ್ತರಣೆಯ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟವಾಗುವ ಸಾಧ್ಯತೆಯಿದೆ.