ಬೆಂಗಳೂರು, ಮೇ 29-ಸಮ್ಮಿಶ್ರ ಸರ್ಕಾರದ ಉಳಿವಿಗಾಗಿ ಸಂಪುಟ ಪುನಾರಚಿಸಲು ನಡೆದ ಚರ್ಚೆಯಲ್ಲಿ ಕಾಂಗ್ರೆಸ್ ನಾಯಕರ ನಡುವೆಯೇ ಭಿನ್ನಮತ ತಲೆದೋರಿದೆ.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಂಪುಟ ಸೇರುವವರ ಮತ್ತು ಕೈಬಿಡುವವರ ಪ್ರತ್ಯೇಕ ಪಟ್ಟಿಯನ್ನು ಮಂಡನೆ ಮಾಡಿರುವುದು ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಒಂದು ಹಂತದಲ್ಲಿ ಸಿದ್ದರಾಮಯ್ಯ ಅವರು ಸಭೆ ಮುಂದುವರೆಯುತ್ತಿದ್ದರೂ ತಾವು ಎದ್ದು ಅರ್ಧಕ್ಕೆ ಹೊರನಡೆದಿದ್ದಾರೆ. ಈ ಮೊದಲು ಸಂಪುಟ ಪುನಾರಚನೆ ಬೇಡ, ವಿಸ್ತರಣೆಯಷ್ಟೇ ಸಾಕು ಎಂದು ಸಿದ್ದರಾಮಯ್ಯ ವಾದಿಸಿದ್ದರು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಸಂಪುಟ ವಿಸ್ತರಣೆಯಾಗಲೇಬೇಕೆಂಬ ಅನಿವಾರ್ಯತೆ ಎದುರಾಗಿದೆ.
ಸಿದ್ದರಾಮಯ್ಯ ಅವರು ಕಾಂಗ್ರೆಸ್ನಿಂದ ಜಮೀರ್ಅಹಮ್ಮದ್ಖಾನ್, ಜಯಮಾಲಾ, ಆರ್.ಬಿ.ತಿಮ್ಮಾಪುರ್, ಪ್ರಿಯಾಂಕ್ ಖರ್ಗೆ, ಕೃಷ್ಣಭೈರೇಗೌಡ ಹಾಗೂ ಜೆಡಿಎಸ್ನಲ್ಲಿ ಎಸ್.ಆರ್.ಶ್ರೀನಿವಾಸ್, ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ ಅವರನ್ನು ಕೈಬಿಡಬೇಕು ಎಂದು ಪಟ್ಟಿ ಸಿದ್ಧಪಡಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಪರಮೇಶ್ವರ್ ಅವರು ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ಆರ್.ವಿ.ದೇಶಪಾಂಡೆ, ಯು.ಟಿ.ಖಾದರ್, ಕೃಷ್ಣಭೈರೇಗೌಡ ಅವರನ್ನು ಕೈಬಿಟ್ಟು, ಸುಧಾಕರ್, ಅರೆಬೈಲು ಶಿವರಾಮ್ ಹೆಬ್ಬಾರ್, ಅಖಂಡ ಶ್ರೀನಿವಾಸ ಮೂರ್ತಿ, ಬಿ.ಸಿ.ಪಾಟೀಲ್, ಬಿ.ಕೆ.ಸಂಗಮೇಶ್ ಮತ್ತಿತರರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ವಾದ ಮಂಡಿಸಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ಅವರು ರಮೇಶ್ ಜಾರಕಿ ಹೊಳಿ, ಕೆ.ಸುಧಾಕರ್, ನಾಗೇಂದ್ರ ಮತ್ತಿತರ ಹೆಸರುಗಳನ್ನು ಪ್ರಸ್ತಾಪಿಸಿದ್ದಾರೆ.
ಈ ಇಬ್ಬರೂ ನಾಯಕರ ನಡುವೆ ಸಂಪುಟ ವಿಸ್ತರಣೆ ಬಗ್ಗೆ ಗೊಂದಲಕಾರಿ ಅಭಿಪ್ರಾಯಗಳಿವೆ. ಹೀಗಾಗಿ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ತಲೆಬಾಗಬೇಕು ಎಂದು ವೇಣುಗೋಪಾಲ್ ಸೂಚನೆ ನೀಡಿದ್ದಾರೆ.
ಮೂಲಗಳ ಪ್ರಕಾರ ಸಚಿವ ಆರ್.ವಿ.ದೇಶಪಾಂಡೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. ಒಂದು ವೇಳೆ ನನ್ನನ್ನು ಸಂಪುಟದಿಂದ ಕೈಬಿಟ್ಟಿದ್ದೇ ಆದರೆ ನಾನು ಪರ್ಯಾಯ ದಾರಿಯ ಬಗ್ಗೆ ಯೋಚಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಇಂದು ಮಧ್ಯಾಹ್ನದವರೆಗೂ ನಡೆದ ಚರ್ಚೆಯಲ್ಲಿ ಸಂಪುಟ ಪುನಾರಚನೆಯ ಒಮ್ಮತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಸಿದ್ದರಾಮಯ್ಯ ಅವರು ಮೈಸೂರು ಲೋಕಸಭಾ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಜಿ.ಟಿ.ದೇವೇಗೌಡ ಅವರನ್ನು ಕೈಬಿಡಬೇಕೆಂದು ಒತ್ತಾಯಿಸಿರುವುದಾಗಿ ತಿಳಿದುಬಂದಿದೆ.
ಜೆಡಿಎಸ್ನ ಪಾಲಿನ ಸಂಪುಟ ಪುನಾರಚನೆ ಬಗ್ಗೆ ದೇವೇಗೌಡರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳುವ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚರ್ಚೆಗೆ ಇತಿಶ್ರೀ ಹಾಡಿದ್ದಾರೆ.
ಇಂದು ಸಂಜೆ ನಡೆಯುವ ಶಾಸಕಾಂಗ ಸಭೆಯಲ್ಲಿ ಸಂಪುಟ ಪುನಾರಚನೆಯೋ, ವಿಸ್ತರಣೆಯೋ ಎಂಬ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಸಂಪುಟ ಪುನಾರಚನೆಯೇ ಅಂತಿಮವಾದರೆ ಕೈಬಿಡುವವರ ಹೆಸರುಗಳನ್ನು ನಾಳೆ ಮತ್ತೊಂದು ಸುತ್ತಿನ ಸಭೆ ನಡೆಸಿ ಅಂತಿಮಗೊಳಿಸಲು ನಿರ್ಧರಿಸಲಾಗಿದೆ.