ಅಭಿವೃದ್ಧಿ ಕೆಲಸ ಮಾಡುವುದು ನಮ್ಮ ಆದ್ಯತೆ-ದಿನೇಶ್ ಗುಂಡುರಾವ್

ಬೆಂಗಳೂರು, ಮೇ 29-ಕೆಲವರಿಗೆ ಅಧಿಕಾರ ಕೊಡುವ ಸಲುವಾಗಿ ಸಂಪುಟ ಪುನಾರಚಿಸಬೇಕು, ವಿಸ್ತರಣೆ ಮಾಡಬೇಕೆಂಬ ಪ್ರಶ್ನೆ ನಮ್ಮ ಮುಂದಿಲ್ಲ. ಜನ ಅಧಿಕಾರ ಕೊಟ್ಟಿದ್ದಾರೆ. ಅದನ್ನು ಬಳಸಿಕೊಂಡು ಅಭಿವೃದ್ಧಿ ಕೆಲಸ ಮಾಡುವುದು ನಮ್ಮ ಆದ್ಯತೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಹೇಳಿದರು.

ಕುಮಾರಕೃಪಾ ಅತಿಥಿ ಗೃಹದಲ್ಲಿ ಜೆಡಿಎಸ್-ಕಾಂಗ್ರೆಸ್ ಹಿರಿಯ ನಾಯಕರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಎರಡರಲ್ಲಿ ಯಾವುದನ್ನು ಮಾಡಬೇಕೆಂಬ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಸಂಜೆ ಶಾಸಕಾಂಗ ಸಭೆ ಕರೆದಿದ್ದೇವೆ. ಎಲ್ಲರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ. ಕಾಂಗ್ರೆಸ್‍ಗೆ ನಮ್ಮ ಯಾವ ಶಾಸಕರ ಮೇಲೂ ಅಪನಂಬಿಕೆ ಇಲ್ಲ. ಎಲ್ಲರೂ ಒಟ್ಟಾಗಿದ್ದೇವೆ. ರಮೇಶ್ ಜಾರಕಿಹೊಳಿ ಅವರನ್ನು ಕೆಲವು ಶಾಸಕರು ಭೇಟಿಮಾಡಿದ ತಕ್ಷಣ ಅನುಮಾನ ಪಡಬೇಕಿಲ್ಲ. ಸದ್ಯಕ್ಕೆ ಸರ್ಕಾರ ಸುಭದ್ರವಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಬರಗಾಲ ಇದೆ. ಕುಡಿಯುವ ನೀರು, ಮೇವು, ಜನರ ಉದ್ಯೋಗದ ಸಮಸ್ಯೆಗಳು ಕಾಡುತ್ತಿವೆ. ನಾವು ಆ ಬಗ್ಗೆ ಹೆಚ್ಚು ಚರ್ಚೆ ನಡೆಸುತ್ತಿದ್ದೇವೆ. ಸರ್ಕಾರ ಇನ್ನಷ್ಟು ಉತ್ತಮ ಸಾಧನೆಗಳನ್ನು ಮಾಡಬೇಕು, ಜನರ ಸಮಸ್ಯೆಗಳನ್ನು ಬಗೆಹರಿಸಬೇಕು. ಒಳ್ಳೆಯ ಆಡಳಿತ ಕೊಡಬೇಕು ಎಂಬುದು ನಮ್ಮ ಆದ್ಯತೆ. ಸಮ್ಮಿಶ್ರ ಸರ್ಕಾರ ಆತಂಕದಲ್ಲಿದೆ, ಅತಂತ್ರದಲ್ಲಿದೆ ಎಂಬುದೆಲ್ಲ ಊಹಾಪೋಹ. ಸರ್ಕಾರ ಸುಭದ್ರವಾಗಿದೆ. ನಮ್ಮಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ತಮ್ಮ ರಾಜೀನಾಮೆ ಹಿಂಪಡೆದು ಪಕ್ಷದ ಅಧ್ಯಕ್ಷರಾಗಿ ಮುಂದುವರೆಯಬೇಕು. ಅವರೊಬ್ಬ ಉತ್ತಮ ಸಂಘಟನಾಕಾರ.

ಮಾನವೀಯತೆವುಳ್ಳ ವ್ಯಕ್ತಿ, ಕ್ರಿಯಾಶೀಲ ನಾಯಕ. ಮುಂದಿನ ದಿನಗಳಲ್ಲೂ ಅವರ ನೇತೃತ್ವದಲ್ಲೇ ಪಕ್ಷ ಸಂಘಟನೆಯಾಗಬೇಕು ಎಂದು ದಿನೇಶ್‍ಗುಂಡೂರಾವ್ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ