ಬೆಂಗಳೂರು, ಮೇ 29-ಪಕ್ಷೇತರರಾಗಿ ಚುನಾಯಿತರಾಗಿರುವ ಇಬ್ಬರು ಶಾಸಕರು ಪ್ರತಿ ದಿನ ಒಂದೊಂದು ಪಕ್ಷದ ನಾಯಕರ ಮನೆಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ರಾಜಕೀಯಕ್ಕೆ ಮಹತ್ವದ ತಿರುವು ನೀಡುತ್ತಿದ್ದಾರೆ.
ಸಮ್ಮಿಶ್ರ ಸರ್ಕಾರದ ಸಂಖ್ಯಾಬಲದ ದೃಷ್ಟಿಯಿಂದ ಇಬ್ಬರು ಪಕ್ಷೇತರರ ಗೆಲುವು ಅತ್ಯಂತ ಮಹತ್ವ ಪಡೆದುಕೊಂಡಿದೆ. ಇತ್ತೀಚಿನ ಬೆಳವಣಿಗೆಯಲ್ಲಿ ರಾಣಿಬೆನ್ನೂರಿನ ಶಾಸಕ ಶಂಕರ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ದೆಹಲಿಗೆ ಭೇಟಿ ನೀಡಿ ತಾವು ಕಾಂಗ್ರೆಸ್ಗೆ ಬೆಂಬಲ ನೀಡುವುದಾಗಿ ಹೇಳಿದ್ದರು.
ಮುಳಬಾಗಿಲು ಕ್ಷೇತ್ರದ ಶಾಸಕ ನಾಗೇಶ್ ಅವರು ಸಚಿವ ಡಿ.ಕೆ.ಶಿವಕುಮಾರ್ ಜೊತೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ತಮ್ಮ ಬೆಂಬಲ ಮೈತ್ರಿಕೂಟದ ಸರ್ಕಾರಕ್ಕೆ ಎಂದು ಘೋಷಣೆ ಮಾಡಿದ್ದರು. ಆದರೆ ನಮ್ಮ ಬೆಂಬಲಕ್ಕೆ ಪ್ರತಿಯಾಗಿ ಸಚಿವ ಸ್ಥಾನ ನೀಡಬೇಕೆಂಬುದು ಅವರ ಬೇಡಿಕೆಯಾಗಿತ್ತು.
ಬಹುತೇಕ ಜೆಡಿಎಸ್-ಕಾಂಗ್ರೆಸ್ ನಾಯಕರು ಇಬ್ಬರು ಪಕ್ಷೇತರರನ್ನು ಸಚಿವರನ್ನಾಗಿ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಆದರೆ ಇಂದು ದಿಢೀರ್ ಬೆಳವಣಿಗೆಯಲ್ಲಿ ಇಬ್ಬರು ಪಕ್ಷೇತರ ಶಾಸಕರು ಕಾಂಗ್ರೆಸ್ನ ಬಂಡಾಯ ಶಾಸಕ ರಮೇಶ್ ಜಾರಕಿ ಹೊಳಿ ಅವರನ್ನು ಭೇಟಿ ಮಾಡಿದ್ದಾರೆ. ಅವರೊಂದಿಗೆ ಕಾಂಗ್ರೆಸ್ನ ಅತೃಪ್ತ ಶಾಸಕ ಮಹೇಶ್ ಕುಮಟಳ್ಳಿ ಕೂಡ ಇರುವುದು ಅಚ್ಚರಿ ಮೂಡಿಸಿದೆ.
ಮೂಲಗಳ ಪ್ರಕಾರ ಮಹೇಶ್ ಕುಮಟಳ್ಳಿ ಸಚಿವ ಸ್ಥಾನ ಆಕಾಂಕ್ಷಿಯಲ್ಲ. ಈ ಇಬ್ಬರು ಪಕ್ಷೇತರರಿಗೆ ಸಚಿವ ಸ್ಥಾನದ ಭರವಸೆ ಸಿಕ್ಕಿದೆ. ಒಂದು ಕಾಲದಲ್ಲಿ ಆಪರೇಷನ್ ಕಮಲದ ನೇತೃತ್ವ ವಹಿಸಿ ತಮಗೆ ಬೆಂಬಲವಾಗಿ ನಿಂತಿದ್ದ ರಮೇಶ್ ಜಾರಕಿ ಹೊಳಿ ಅವರನ್ನು ಮನವೊಲಿಸಲು ಪಕ್ಷೇತರರು ಪ್ರಯತ್ನ ನಡೆಸಿದ್ದಾರೆ. ಹಾಗಾಗಿಯೇ ನಾಲ್ವರು ಶಾಸಕರು ಇಂದು ಪ್ರತ್ಯೇಕ ಸಭೆ ನಡೆಸಿದ್ದಾರೆ ಎನ್ನಲಾಗಿದೆ.
ಆದರೆ ರಮೇಶ್ ಜಾರಕಿ ಹೊಳಿ ಅವರು ಸಚಿವ ಸ್ಥಾನದ ಭರವಸೆ ಸಿಕ್ಕರೂ ಕೂಡ ಕಾಂಗ್ರೆಸ್ ಮೇಲಿನ ಮುನಿಸನ್ನು ಕಡಿಮೆ ಮಾಡಿಕೊಂಡಿಲ್ಲ. ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವುದಾಗಿ ಪಟ್ಟು ಹಿಡಿದಿದ್ದಾರೆ. ಸಚಿವ ಸ್ಥಾನ ಕೊಟ್ಟರೂ ಸಚಿವ ಡಿ.ಕೆ.ಶಿವಕುಮಾರ್ ಬಳಿ ಇರುವ ಜಲಸಂಪನ್ಮೂಲ ಖಾತೆಯೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಬಿಜೆಪಿ ರಮೇಶ್ ಜಾರಕಿ ಹೊಳಿ ಅವರ ಜೊತೆ ಈಗಲೂ ನಿರಂತರ ಸಂಪರ್ಕದಲ್ಲಿದೆ. ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಭಾಗವಹಿಸಲು ರಮೇಶ್ ಜಾರಕಿ ಹೊಳಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ಅವರ ಮನವೊಲಿಸಲು ಮಹೇಶ್ ಕುಮಟಳ್ಳಿ ಅವರನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಸಂಧಾನಕಾರರಾಗಿ ಬಳಸಿಕೊಳ್ಳುತ್ತಿದ್ದಾರೆ. ಇದೆಲ್ಲದರ ಹೊರತಾಗಿ ಪಕ್ಷೇತರರು ಮೈತ್ರಿ ಸರ್ಕಾರಕ್ಕೆ ನಿಷ್ಠರಾಗಿದ್ದಾರೆಯೋ ಅಥವಾ ಬಿಜೆಪಿ ಜೊತೆ ಸೇರಿ ರಾಜಕೀಯ ಚದುರಂಗ ಆಟ ವಾಡುತ್ತಿದ್ದಾರೆಯೋ ಎಂಬ ಗೊಂದಲ ಉಂಟಾಗಿದೆ.
ಒಟ್ಟಿನಲ್ಲಿ ರಾಜಕೀಯ ಪ್ರಸ್ತುತ ಬೆಳವಣಿಗೆಯಲ್ಲಿ ಬರೀ ಬ್ಲ್ಯಾಕ್ಮೇಲ್ಗಳಿಂದಲೇ ತುಂಬಿ ಹೋಗಿದೆ.