ಬೆಂಗಳೂರು, ಮೇ 29- ಉಪ ಮೇಯರ್ ರಮೀಳಾ ಉಮಾಶಂಕರ್ ಹಾಗೂ ಏಳುಮಲೈ ನಿಧನದಿಂದ ತೆರವಾಗಿರುವ ಕಾವೇರಿಪುರ ಮತ್ತು ಸಗಾಯ್ಪುರಂ ವಾರ್ಡ್ಗೆ ಇಂದು ನಡೆಯುತ್ತಿರುವ ಉಪ ಚುನಾವಣೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡರೂ ಮತದಾರರು ಮತದಾನಕ್ಕೆ ನಿರಾಸಕ್ತಿ ತೋರುತ್ತಿದ್ದಾರೆ. ಬೆಳಗ್ಗೆ ಕೆಲವು ಕೇಂದ್ರಗಳಲ್ಲಿ ಸರದಿ ಸಾಲು ಕಂಡು ಬಂದಿತ್ತಾದರೂ 9 ಗಂಟೆಯ ನಂತರ ಮತದಾನ ಕೇಂದ್ರಗಳು ಬಿಕೋ ಎನ್ನುತ್ತಿದ್ದವು.
ಕಾವೇರಿಪುರ ವಾರ್ಡ್ನಲ್ಲಿ ಒಟ್ಟು 49,238 ಮತದಾರರಿದ್ದು , 43 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸಗಾಯ್ಪುರಂ ವಾರ್ಡ್ನಲ್ಲಿ 31,928 ಮತದಾರರಿದ್ದು, 33 ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು , ಸಂಜೆ 5 ಗಂಟೆಯವರೆಗೂ ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಕಾವೇರಿ ಪುರ ವಾರ್ಡ್ನಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಪಲ್ಲವಿ ಹಾಗೂ ಮೈತ್ರಿ ಅಭ್ಯರ್ಥಿ ಸುಶೀಲಾ ನಡುವೆ ಬಿರುಸಿನ ಸ್ಪರ್ಧೆ ಕಂಡು ಬಂದಿದ್ದರೆ, ಸಗಾಯ್ಪುರಂ ವಾರ್ಡ್ನಲ್ಲಿ ಬಿಜೆಪಿ ಅಭ್ಯರ್ಥಿ ಜೈರಿಮ್, ಮೈತ್ರಿ ಅಭ್ಯರ್ಥಿ ಪಳನಿಯಮ್ಮ , ಪಕ್ಷೇತರ ಅಭ್ಯರ್ಥಿ ಮಾರಿಮುತ್ತು ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಭದ್ರಕೋಟೆ: ಕಾವೇರಿಪುರ ವಾರ್ಡ್ನಲ್ಲಿ ತಮ್ಮ ಹಕ್ಕು ಚಲಾಯಿಸಿದ ನಂತರ ಮಾತನಾಡಿದ ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಆರ್. ಪ್ರಕಾಶ್ ಅವರು ಈ ವಾರ್ಡ್ ಜೆಡಿಎಸ್-ಕಾಂಗ್ರೆಸ್ ಭದ್ರಕೋಟೆ. ರಮೀಳಾ ಉಮಾಶಂಕರ್ ಮಾಡಿರುವ ಅಭಿವೃದ್ಧಿ ಕೆಲಸ ಹಾಗೂ ಅವರ ಸಾವಿನ ಅನುಕಂಪದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಪ್ರಿಯಕೃಷ್ಣ ಅವರ ಶ್ರೀ ರಕ್ಷೆಯಿಂದ ಸುಶೀಲಾ ಸುರೇಶ್ ಅವರು ಭರ್ಜರಿ ಗೆಲುವು ಸಾಧಿಸುತ್ತಾರೆ. ಬಿಜೆಪಿಗೆ ಇಲ್ಲಿ ಠೇವಣಿ ಸಿಗುವುದಿಲ್ಲ ಎಂದರು.
ಗೆಲ್ಲೋದು ನಾನೇ: ಸಗಾಯ್ಪುರಂ ವಾರ್ಡ್ನಲ್ಲಿ ಕಾಂಗ್ರೆಸ್ ಪಕ್ಷದವರು ಕೆಲವು ರೌಡಿಗಳನ್ನು ಪಕ್ಷೇತರ ಅಭ್ಯರ್ಥಿಗಳನ್ನಾಗಿ ನಿಲ್ಲಿಸಿದ್ದಾರೆ. ಅವರು ಮತಗಟ್ಟೆಗಳ ಬಳಿ ಜನರನ್ನು ಎದುರಿಸಿ ಬೆದರಿಸಿ ಕಾಂಗ್ರೆಸ್ಗೆ ಮತ ಹಾಕುವಂತೆ ಒತ್ತಡ ಹಾಕುತ್ತಿದ್ದಾರೆ. ಈ ವಿಷಯ ತಿಳಿದು ನಾನು ಸ್ಥಳಕ್ಕೆ ಬಂದಿದ್ದೇನೆ. ನಾನು ಯಾರ ಮೇಲೂ ಗಲಾಟೆ ಮಾಡೋಲ್ಲ. ನಾನು ಒಂಟಿ ಹೆಣ್ಣೇ ಎಂದು ದಬ್ಬಾಳಿಕೆ ಮಾಡುತ್ತಿದ್ದಾರೆ. ಆದರೆ ಇಲ್ಲಿನ ಮತದಾರರು ನನ್ನನ್ನು 10,000 ಮತಗಳ ಅಂತರದಿಂದ ಗೆಲ್ಲಿಸುತ್ತಾರೆ ಎಂದು ಪಕ್ಷೇತರ ಸದಸ್ಯೆ ಮಾರಿಮುತ್ತು ತಿಳಿಸಿದರು.
ಶೇಕಡಾವಾರು ಮತದಾನ: ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾದರೂ 9 ಗಂಟೆ ವೇಳೆಗೆ ಸಗಾಯ್ಪುರಂ ವಾರ್ಡ್ನಲ್ಲಿ ಶೇ.7.74, ಕಾವೇರಿ ಪುರ ವಾರ್ಡ್ನಲ್ಲಿ ಶೇ.9.93ನಷ್ಟು ಮತದಾನವಾಗಿತ್ತು.
ಬೆಳಗ್ಗೆ 11 ಗಂಟೆ ವೇಳೆಗೆ ಸಗಾಯ್ಪುರಂ ವಾರ್ಡ್ನಲ್ಲಿ ಶೇ.17.27ರಷ್ಟು , ಕಾವೇರಿ ಪುರದಲ್ಲಿ ಶೇ.9.17ರಷ್ಟು ಮತದಾನವಾಗಿತ್ತು.