ರಾಜಸ್ಥಾನ ಸಿಎಂ ಕುರ್ಚಿ ಗಡಗಡ? ಸಚಿವರು ಶಾಸಕರಿಂದಲೇ ಕ್ರಮಕ್ಕೆ ಆಗ್ರಹ

ಜೈಪುರ/ನವದೆಹಲಿರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರಿಗೆ ಪಕ್ಷಕ್ಕಿಂತ ಪುತ್ರನ ಹಿತವೇ ಮುಖ್ಯವಾಯಿತು ಎಂಬ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದೇ ತಡ, ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಸಂಚಲನ ಸೃಷ್ಟಿಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಕಳಪೆ ಸಾಧನೆ ಮಾಡಿದ್ದರ ಹೊಣೆಗಾರಿಕೆಯನ್ನು ನಿಗದಿಗೊಳಿಸಿ, ಸೂಕ್ತ ಕ್ರಮ ಜರುಗಿಸಬೇಕು ಎಂದು ಸಚಿವರು ಹಾಗೂ ಶಾಸಕರು ಬಹಿರಂಗವಾಗಿಯೇ ಆಗ್ರಹಿಸತೊಡಗಿದ್ದಾರೆ. ಅವರೆಲ್ಲರ ಗುರಿ ಅಶೋಕ್‌ ಗೆಹ್ಲೋಟ್‌ ಆಗಿದ್ದಾರೆ ಎಂಬುದು ಸ್ಪಷ್ಟ.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜಸ್ಥಾನದಾದ್ಯಂತ 130 ರಾರ‍ಯಲಿಗಳಲ್ಲಿ ಗೆಹ್ಲೋಟ್‌ ಪಾಲ್ಗೊಂಡಿದ್ದರು. ಆ ಪೈಕಿ 93 ಸಮಾವೇಶಗಳು ಅವರ ಪುತ್ರ ವೈಭವ್‌ ಸ್ಪರ್ಧಿಸಿದ್ದ ಜೋಧ್‌ಪುರ ಕ್ಷೇತ್ರದಲ್ಲೇ ನಡೆದಿದ್ದವು. ಹೀಗಾಗಿ ರಾಜಸ್ಥಾನದಲ್ಲಿ ಅಧಿಕಾರದಲ್ಲಿದ್ದರೂ ಒಂದು ಕ್ಷೇತ್ರದಲ್ಲೂ ಕಾಂಗ್ರೆಸ್‌ ಗೆಲ್ಲಲಿಲ್ಲ ಎಂಬುದು ಕಾಂಗ್ರೆಸ್ಸಿಗರ ಆಕ್ರೋಶ.

ರಾಹುಲ್‌ ಗಾಂಧಿ ಟೀಕೆ ಬೆನ್ನಲ್ಲೇ ರಾಜಸ್ಥಾನದ ಸಚಿವರುಗಳು ಸೋಲಿನ ಹೊಣೆಗಾರಿಕೆಯನ್ನು ನಿಗದಿಗೊಳಿಸಬೇಕು ಎಂಬ ಹಕ್ಕೊತ್ತಾಯ ಮಾಡಿದ್ದಾರೆ. ಇದರಿಂದ ಪಕ್ಷದಲ್ಲಿ ಗೆಹ್ಲೋಟ್‌ ತಲೆದಂಡಕ್ಕೆ ಒತ್ತಡ ನಿರ್ಮಾಣವಾಗಲು ವೇದಿಕೆಯಾದಂತಾಗಿದೆ ಎಂದು ಹೇಳಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ