ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ಮರಳಿದ ಡಿಕೆ ಶಿವಕುಮಾರ್ ಬಾಯಿಗೆ ಬೀಗ, ಕಿವಿಗೆ ಹತ್ತಿ, ಕಣ್ಣಿಗೆ ಬಟ್ಟೆ!

ಬೆಂಗಳೂರು: ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಕಾಂಗ್ರೆಸ್​ ಹಿರಿಯ ನಾಯಕ ಡಿಕೆ ಶಿವಕುಮಾರ್​ ಬೆಂಗಳೂರಿಗೆ ವಾಪಾಸಾಗಿದ್ದಾರೆ. ಕರ್ನಾಟಕ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಇಂಚಿಚು ಮಾಹಿತಿ ಪಡೆದುಕೊಂಡಿದ್ದ ಅವರು, ಮಾಧ್ಯಮಗಳ ಮುಂದೆ ಮಾರ್ಮಿಕವಾಗಿ ಉತ್ತರಿಸಿದ್ದಾರೆ.

2019ರ ಲೋಕಸಭಾ ಚುನಾವಣಾ ಫಲಿತಾಂಶ ಕಾಂಗ್ರೆಸ್​​ಗೆ ದೊಡ್ಡ ಆಘಾತವನ್ನೇ ನೀಡಿದೆ. ಸೋಲಿನಿಂದ ಕಂಗಾಲಾಗಿರುವ ಹಿರಿಯ ನಾಯಕರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದಂತೆ ಸೂಚಿಸಿದ್ದಾರೆ. ಹಾಗಾಗಿ ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ರಾಜ್ಯಕ್ಕೆ ಮರಳಿದ ಡಿಕಿಶಿ ಮಾಧ್ಯಮಗಳನ್ನು ಕಂಡು ಮುಗಳ್ನಗೆ ಬೀರಿದರು.

ಮಾಧ್ಯಮಗಳ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸದೇ ಅವರು ಸುತ್ತಿಬಳಸಿ ಮಾತನಾಡಿದ್ದಾರೆ.

“ನಾನು ಬಾಯಿಗೆ ಬೀಗ, ಕಿವಿಗೆ ಹತ್ತಿ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದೇನೆ,” ಎಂದು ಡಿಕೆಶಿ ಹೇಳಿದರು. ಈ ಮೂಲಕ ಗಾಂಧಿ ತತ್ವವನ್ನು ಸ್ಮರಿಸಿದರು. ಡಿಕೆಶಿಗೆ ರಾಜ್ಯ ರಾಜಕೀಯ ಬೆಳವಣಿಗೆ ಬಗ್ಗೆ ಸಂಪೂರ್ಣ ಮಾಹಿತಿ ಇದೆಯಂತೆ. ಈ ಬಗ್ಗೆ ಮಾತನಾಡಿರುವ ಡಿಕೆಶಿ, “ನನಗೆಲ್ಲಾ ಗೊತ್ತಾಗಿದೆ. ನನಗೆಲ್ಲಾ ಮಾಹಿತಿ ಸಿಕ್ಕಿದೆ. ರಾಜ್ಯದ ಮತ್ತು ಮಂಡ್ಯದ ಚುನಾವಣಾ ಫಲಿತಾಂಶದ ಬಗ್ಗೆ ನಾನೇನೂ ಮಾತನಾಡುವುದಿಲ್ಲ,” ಎಂದಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್​ ಕೇವಲ ಒಂದು ಸ್ಥಾನ ಗೆಲ್ಲಲು ಮಾತ್ರ ಸಾಧ್ಯವಾಗಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್​​ಗೆ ಆದ ಹಿನ್ನಡೆಯಿಂದ ಡಿಕೆಶಿ ಕಂಗಾಲಾಗಿದ್ದಾರಂತೆ. ಅಲ್ಲದೆ ಈ ಸೋಲಿನ ಬಗ್ಗೆ ಡಿಕೆಶಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಡಿಕೆಶಿ ಪ್ರಮುಖ ಪಾತ್ರವಹಿಸಿದ್ದರು. ಶಿವಮೊಗ್ಗದಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಡಿಕೆಶಿ ಅಬ್ಬರದ ಪ್ರಚಾರ ನಡೆಸಿದ್ದರು. ಮಧು ಬಂಗಾರಪ್ಪರನ್ನು ಗೆಲ್ಲಿಸುವ ಸಂಪೂರ್ಣ ಜವಾಬ್ದಾರಿ ಡಿಕೆಶಿ ಮೇಲಿತ್ತು. ಆದರೆ, ಮಧು ಬಂಗಾರಪ್ಪ ಸೋತಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ