ಬೆಂಗಳೂರು, ಮೇ 28- ರಾತ್ರೋರಾತ್ರಿ ಜಯನಗರ ಬಿಡಿಎ ಶಾಪಿಂಗ್ ಕಾಂಪ್ಲೆಕ್ಸ್ಗೆ ಬೀಗ ಹಾಕಿರುವುದಕ್ಕೆ ನೂರಾರು ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಮಾಹಿತಿ ಕೊಡದೆ ರಾತ್ರೋರಾತ್ರಿ ಕಾಂಪ್ಲೆಕ್ಸ್ಗೆ ಬೀಗ ಹಾಕಿದ್ದಾರೆ. ಯಾವುದೇ ಕಾರಣಕ್ಕೂ ನಾವು ನೂತನ ಕಟ್ಟಡಕ್ಕೆ ಶಿಫ್ಟ್ ಆಗುವುದಿಲ್ಲ.
ಶಿಥಿಲವಾಗಿರುವ ಕಟ್ಟಡದಲ್ಲೇ ವ್ಯಾಪಾರ ಮಾಡುತ್ತೇವೆ ಎಂದು ಪಟ್ಟುಹಿಡಿದಿದ್ದಾರೆ.
ವ್ಯಾಪಾರಿಗಳು ತೀವ್ರ ವಿರೋಧ ಒಡ್ಡಿದ ಹಿನ್ನೆಲೆಯಲ್ಲಿ ಹಳೆ ಕಾಂಪ್ಲೆಕ್ಸ್ನಲ್ಲಿರುವ ಸುಮಾರು 150 ಅಂಗಡಿಗಳಿಗೆ ಬೀಗ ಜಡಿದು ಗೇಟ್ಗೆ ಅಧಿಕಾರಿಗಳು ವೆಲ್ಡಿಂಗ್ ಮಾಡಿದ್ದಾರೆ.
ಕಾಂಪ್ಲೆಕ್ಸ್ ಮುಂದೆ ನೂರಾರು ಮಂದಿ ಬಿಡಿಎ ಅಧ್ಯಕ್ಷರ ಬರುವಿಕೆಗಾಗಿ ಕಾದು ಕುಳಿತಿದ್ದಾರೆ. ಅಧ್ಯಕ್ಷರೇ ಬಂದು ಇಲ್ಲಿನ ಸಮಸ್ಯೆ ತೀರ್ಮಾನಿಸಬೇಕು. ನಮಗೆ ಕಿಂಚಿತ್ತೂ ಮಾಹಿತಿ ನೀಡದೆ ರಾತ್ರೋರಾತ್ರಿ ಕಾಂಪ್ಲೆಕ್ಸ್ಗೆ ಬೀಗ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಯನಗರದಲ್ಲಿರುವ ಬಿಡಿಎ ಶಾಪಿಂಗ್ ಕಾಂಪ್ಲೆಕ್ಸ್ ಇತಿಹಾಸ ಪ್ರಸಿದ್ಧಿ ಹೊಂದಿದೆ. 1973ರಲ್ಲಿ ಈ ಮಾರುಕಟ್ಟೆ ಸ್ಥಾಪನೆಗೊಂಡಿತ್ತು. 1975ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಉದ್ಘಾಟಿಸಿದ್ದರು. ನಾಗಣ್ಣ ಎಂಬುವವರು ಆಗ ಮೇಯರ್ ಆಗಿದ್ದರು. ಇಲ್ಲಿ ಒಟ್ಟು 175 ಮಳಿಗೆಗಳಿವೆ. ಏಷ್ಯಾದ ಸುಸಜ್ಜಿತ ಮಾರುಕಟ್ಟೆಗಳಲ್ಲೊಂದು ಎಂಬ ಹೆಗ್ಗಳಿಕೆ ಪಡೆದಿದೆ.
ಆದರೆ, 2008ರಲ್ಲಿ ಶಾರ್ಟ್ ಸಕ್ರ್ಯೂಟ್ ಆಗಿ ಈ ಕಾಂಪ್ಲೆಕ್ಸ್ ಸುಟ್ಟು ಹೋಗಿದ್ದುದನ್ನು ಸ್ಮರಿಸಬಹುದು. ವ್ಯಾಪಾರಸ್ಥರ ಅನುಕೂಲಕ್ಕಾಗಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಿದ್ದರೂ ಕೂಡ ನೂತನ ಕಟ್ಟಡಕ್ಕೆ ವ್ಯಾಪಾರಿಗಳು ಶಿಫ್ಟ್ ಆಗದೆ ತಕರಾರು ಮಾಡಿದ್ದಾರೆ.
ವ್ಯಾಪಾರಿಗಳ ವಿರೋಧದ ಹಿನ್ನೆಲೆಯಲ್ಲಿ ಈ ಕಾಂಪ್ಲೆಕ್ಸ್ಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ.