ಸಚಿವ ಸ್ಥಾನ ಕೊಟ್ಟರೆ ಸರ್ಕಾರಕ್ಕೆ ಬೆಂಬಲ-ಪಕ್ಷೇತರ ಶಾಸಕ ನಾಗೇಶ್

ಬೆಂಗಳೂರು,ಮೇ 28- ಕಳೆದ ವರ್ಷ ಮುಂಬೈ ರೆಸಾರ್ಟ್ ಯಾತ್ರೆಯ ವೇಳೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದ್ದ ಮುಳಬಾಗಿಲು ಕ್ಷೇತ್ರ ಪಕ್ಷೇತರ ಶಾಸಕ ನಾಗೇಶ್, ಈಗ ಮತ್ತೆ ಮೈತ್ರಿ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಪ್ರತಿಯಾಗಿ ತಮಗೆ ಸಚಿವ ಸ್ಥಾನ ನೀಡಬೇಕೆಂದು ಷರತ್ತು ವಿಧಿಸಿದ್ದಾರೆ.

ಇಂದು ಬೆಳಗೆ ಸಚಿವ ಡಿ.ಕೆ.ಶಿವಕುಮಾರ್ ಅವರು, ನಾಗೇಶ್ ಅವರನ್ನು ಗೃಹ ಕಚೇರಿ ಕೃಷ್ಣಾಗೆ ಕರೆದುಕೊಂಡು ಬಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿಸಿದ್ದು ಈ ಸಂದರ್ಭದಲ್ಲಿ ನಡೆದ ಮಾತುಕತೆಯಲ್ಲಿ ನಾಗೇಶ್ ತಮಗೆ ರಾಜಕೀಯವಾಗಿ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಆರಂಭದಲ್ಲೇ ಮೈತ್ರಿಕೂಟಕ್ಕೆ ಬೆಂಬಲ ಕೊಟ್ಟಿದ್ದೆ.ಪಕ್ಷೇತರರಾಗಿದ್ದ ಇಬ್ಬರ ಪೈಕಿ ಶಂಕರ್ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ನನಗೆ ಅವಕಾಶ ಕೊಟ್ಟಿರಲಿಲ್ಲ. ನಮ್ಮ ಬೆಂಬಲ ಪಡೆದ ಮೇಲೆ ನಮಗೂ ಅವಕಾಶ ನೀಡುವುದು ನ್ಯಾಯಧರ್ಮ. ಅದನ್ನು ಪಾಲನೆ ಮಾಡಿ.ಈವರೆಗೂ ನನಗೆ ಅನ್ಯಾಯವಾಗಿದೆ. ಸಚಿವ ಸ್ಥಾನ ಕೊಟ್ಟರೆ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಮುಂದುವರೆಸುತ್ತೇನೆ ಎಂದು ಹೇಳಿರುವುದಾಗಿ ಅವರು ತಿಳಿಸಿದರು.

ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಬಿಜೆಪಿಯವರಿಗೆ ಅರ್ಥವಾಗಿದೆ.ಈಗ ಅವರು ನಮ್ಮನ್ನು ಸಂಪರ್ಕಿಸುತ್ತಿಲ್ಲ. ನಾನು ಮೈತ್ರಿಕೂಟಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದೆ. ಅವರು ಕೂಡ ತನ್ನನ್ನು ಸಚಿವರನ್ನಾಗಿ ಮಾಡುವ ಭರವಸೆ ನೀಡಿದ್ದಾರೆ. ಈ ಬಾರಿ ಅನ್ಯಾಯವಾಗುವುದಿಲ್ಲ ಎಂಬ ನಂಬಿಕೆ ಇದೆ. ಒಂದು ವೇಳೆ ಮತ್ತೆ ಅವಕಾಶ ತಪ್ಪಿದರೆ ಮುಂದೆ ಏನು ಮಾಡಬೇಕೆಂದು ಯೋಚಿಸಿ ನಿರ್ಧಾರ ಕೈಗೊಳ್ಳುತ್ತೇನೆ. ನನಗೆ ಸಚಿವ ಸ್ಥಾನಬೇಕು. ನಿಗಮಮಂಡಳಿಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ಮಾಡಿ ಅವಕಾಶ ಮಾಡಿಕೊಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.ಡಿ.ಕೆ.ಶಿವಕುಮಾರ್ ಕೂಡ ನನ್ನ ಪರವಾಗಿ ಮಾತನಾಡಿದ್ದಾರೆ.ನ್ಯಾಯ ಸಿಗುವ ವಿಶ್ವಾಸ ನನಗಿದೆ ಎಂದು ನಾಗೇಶ್ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ