ಜಿಂದಾಲ್ ಕಂಪನಿಗೆ ಜಮೀನು ನೀಡುವ ಅಗತ್ಯವೇನಿತ್ತು?-ಬಿಜೆಪಿ ಮುಖಂಡ ಆರ್.ಆಶೋಕ್

ಬೆಂಗಳೂರು,ಮೇ 28- ಜಿಂದಾಲ್ ಕಂಪನಿಗೆ ತರಾತುರಿಯಲ್ಲಿ ರಾಜ್ಯ ಸರ್ಕಾರ ಜಮೀನು ನೀಡುವ ಅಗತ್ಯವೇನಿತ್ತು? ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಇಂದಿಲ್ಲಿ ಪ್ರಶ್ನಿಸಿದರು.

ಲೋಕಸಭಾ ಚುನಾವಣೆ ನೀತಿ ಸಂಹಿತೆ ಬೆನ್ನಲ್ಲೇ ಮೈತ್ರಿ ಸರ್ಕಾರ ತರಾತುರಿಯಲ್ಲಿ ಜಿಂದಾಲ್‍ಗೆ ಜಮೀನು ನೀಡುವ ನಿರ್ಣಯ ಕೈಗೊಂಡಿದೆ. ಮೈತ್ರಿಸರ್ಕಾರದ ಪತನವಾಗುತ್ತದೆ ಎಂಬ ಆತಂಕದಿಂದ ಈ ನಿರ್ಧಾರ ಕೈಗೊಂಡಿದೆ ಎಂದು ಟೀಕಿಸಿದರು.

ಇದೊಂದು ದೊಡ್ಡ ಹಗರಣವಾಗಬಹುದು. ತಮ್ಮ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಮುಂದಿನ ಹೋರಾಟದ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಜಿಂದಾಲ್‍ಗೆ ಭಾರೀ ಪ್ರಮಾಣದಲ್ಲಿ ಜಮೀನು ನೀಡಲು ತೀರ್ಮಾನ ಕೈಗೊಂಡಿರುವುದು ತಪ್ಪು ಎಂದು ಎಚ್.ಕೆ.ಪಾಟೀಲ್ ಅವರೇ ಹೇಳಿದ್ದಾರೆ. ಅಲ್ಲದೆ ಕಾನೂನು ಇಲಾಖೆ ಕೂಡ ಜಮೀನು ನೀಡುವ ತೀರ್ಮಾನ ಸರಿಯಲ್ಲ ಎಂದು ಎಚ್ಚರಿಕೆ ಕೂಡ ನೀಡಿದ್ದರೂ ಏಕೆ ಸರ್ಕಾರ ಇಂತಹ ನಿರ್ಧಾರ ಕೈಗೊಂಡಿದೆ ಎಂದು ಮರುಪ್ರಶ್ನಿಸಿದರು.

ಈಗಾಗಲೇ ಜಿಂದಾಲ್‍ಗೆ ನೀಡಿರುವ ಜಮೀನುಗಳನ್ನೇ ಬಳಸಿಕೊಂಡಿಲ್ಲ. ಆದರೂ ಜಮೀನು ನೀಡಲು ತರಾತುರಿ ನಿರ್ಧಾರ ಕೈಗೊಳ್ಳುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದರು.

ಯಾವ ಕಾರಣಕ್ಖಾಗಿ ಆ ಪ್ರಮಾಣದ ಜಮೀನು ನೀಡಲು ತೀರ್ಮಾನ ಕೈಗೊಂಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಅಶೋಕ್ ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ