ಮೋದಿ ಪ್ರಮಾಣವಚನ ಸಮಾರಂಭಕ್ಕೆ BIMSTEC ದೇಶಗಳ ನಾಯಕರಿಗೆ ಆಹ್ವಾನ

ನವದೆಹಲಿ: ನರೇಂದ್ರ ಮೋದಿ ಅವರು ಮೇ 30ರಂದು ಎರಡನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 2014ರಲ್ಲಿ ಅವರು ಪ್ರಧಾನಿಯಾದಾಗ ಸಾರ್ಕ್ ರಾಷ್ಟ್ರಗಳ ಮುಖಂಡರಿಗೆ ಆಹ್ವಾನ ನೀಡಿದ್ದರು. ಈ ಬಾರಿ ಬಂಗಾಳ ಕೊಲ್ಲಿಯ BIMSTEC ರಾಷ್ಟ್ರಗಳ ಮುಖಂಡರನ್ನು ಆಹ್ವಾನಿಸಿದ್ದಾರೆ. BIMSTEC ಎಂಬುದು ಬಂಗಾಳ ಕೊಲ್ಲಿ ಬಹುವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಯೋಜನೆಯ ಒಕ್ಕೂಟವಾಗಿದೆ. ಇದರ ಸದಸ್ಯ ರಾಷ್ಟ್ರಗಳಾದ ಬಾಂಗ್ಲಾದೇಶ, ನೇಪಾಳ, ಭೂತಾನ್, ಮಯನ್ಮಾರ್, ಶ್ರೀಲಂಕಾ ಮತ್ತು ಥಾಯ್ಲೆಂಡ್ ದೇಶಗಳ ಮುಖ್ಯಸ್ಥರು ಮೋದಿ ಪ್ರಮಾಣವಚನ ಸಮಾರಂಭಕ್ಕೆ ಬರುವ ನಿರೀಕ್ಷೆ ಇದೆ.

ಇವುಗಳ ಜೊತೆಗೆ, ಮಾರಿಷಸ್ ಮತ್ತು ಕಿರ್ಗಿಸ್ತಾನ್ ದೇಶಗಳ ಪ್ರಧಾನಿಗಳೂ ಕೂಡ ಮೇ 30ರಂದು ಮೋದಿ ಪದಗ್ರಹಣಕ್ಕಾಗಿ ಭಾರತಕ್ಕೆ ಆಗಮಿಸಲಿದ್ದಾರೆ. ಶಾಂಘೈ ಸಹಕಾರ ಸಂಸ್ಥೆ(ಎಸ್​ಸಿಓ)ಯ ಹಾಲಿ ಅಧ್ಯಕ್ಷ ಸ್ಥಾನ ಹೊಂದಿರುವ ಕಿರ್ಗಿಸ್ತಾನ್ ದೇಶಕ್ಕೆ ಮೋದಿ ಆಹ್ವಾನ ಕೊಟ್ಟಿರುವುದು ರಾಜತಾಂತ್ರಿಕ ನಡೆ ಎಂದು ಬಣ್ಣಿಸಲಾಗಿದೆ.

ಚೀನಾದೊಂದಿಗೆ ಅಪ್ತವಾಗುತ್ತಿರುವ ಶ್ರೀಲಂಕಾಗೂ ಮೋದಿ ಆಹ್ವಾನ ಕೊಟ್ಟಿರುವುದು ಗಮನಾರ್ಹ. ಇತ್ತೀಚೆಗೆ ಉಗ್ರ ದಾಳಿಗೆ ಒಳಗಾದ ಶ್ರೀಲಂಕಾಗೆ ಸಾಕಷ್ಟು ಮುಂಚೆಯೇ ಭಾರತದ ಗುಪ್ತಚರ ಸಂಸ್ಥೆಗಳು ದಾಳಿ ಬಗ್ಗೆ ಎಚ್ಚರಿಸಿದ್ದವು. ಲಂಕಾ ಪ್ರಧಾನಿ ಮೈತ್ರಿಪಾಲ ಸಿರಿಸೇನಾ ಕೂಡ ಭಾರತದೊಂದಿಗಿನ ಸಂಬಂಧ ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

ಈ ವರ್ಷದ ಆರಂಭದಲ್ಲಿ ನಡೆದಿದ್ದ ಪ್ರವಾಸೀ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಮಾರಿಷಸ್ ಪ್ರಧಾನಿ ಪ್ರವಿಂದ್ ಜಗನಾಥ್ ಅವರನ್ನೂ ಪ್ರಮಾಣ ವಚನ ಸಮಾರಂಭಕ್ಕೆ ಅತಿಥಿಯಾಗಿ ಬರುವಂತೆ ಮೋದಿ ಆಹ್ವಾನ ಕೊಟ್ಟಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ