ನನಗೆ ಕೇತ್ರದ ಅಭಿವೃದ್ಧಿ ಮುಖ್ಯ-ಶಾಸಕ ಮಹೇಶ್ ಕುಮಟಳ್ಳಿ

ಬೆಂಗಳೂರು, ಮೇ 28-ನನಗೆ ಸಚಿವ ಸ್ಥಾನವೂ ಬೇಡ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನವೂ ಬೇಡ, ಅಥಣಿ ಕ್ಷೇತ್ರದ ಅಭಿವೃದ್ಧಿ ಅಷ್ಟೇ ಮುಖ್ಯ.ಒಂದು ವೇಳೆ ಅವರಾಗಿಯೇ ಕೊಟ್ಟರೂ ನಾನು ಅಧಿಕಾರವನ್ನು ಸ್ವೀಕರಿಸುವುದಿಲ್ಲ ಎಂದು ಶಾಸಕ ಮಹೇಶ್ ಕುಮಟಳ್ಳಿ ತಿಳಿಸಿದ್ದಾರೆ.

ಬೆಂಗಳೂರಿನ ಸೆವೆನ್ ಮಿನಿಸ್ಟರ್ಸ್ ಕ್ವಾಟ್ರರ್ಸ್‍ನಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್‍ನ ಬಂಡಾಯ ಶಾಸಕ ರಮೇಶ್ ಜಾರಕಿ ಹೊಳಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಹೇಶ್ ಕುಮಟಳ್ಳಿ ಅವರು, ಪದೇ ಪದೇ ಮಾಧ್ಯಮಗಳು ನನ್ನ ಹೆಸರನುಮ್ನ ಪ್ರಸ್ತಾಪಿಸುತ್ತಿವೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಅಧಿಕಾರ ಬೇಕು ಎಂಬ ಯಾವ ಬೇಡಿಕೆಗಳನ್ನೂ ನಾನು ಮುಂದಿಟ್ಟಿಲ್ಲ. ಅನಗತ್ಯವಾಗಿ ನನ್ನ ಹೆಸರು ಪ್ರಸ್ತಾಪಿಸಬೇಡಿ ಎಂದು ಮನವಿ ಮಾಡಿದರು.

ನಿನ್ನೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದೆ.ಪದೇ ಪದೇ ಅವರನ್ನು ಭೇಟಿ ಮಾಡಲು ಸಾಧ್ಯವಾಗುವುದಿಲ್ಲ. ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೊಯ್ನಾ ನದಿಯಿಂದ ನೀರು ಹರಿಸಬೇಕು, ಮಹಾರಾಷ್ಟ್ರ-ಕರ್ನಾಟಕ ಸರ್ಕಾರಗಳು ಪರಸ್ಪರ ಒಪ್ಪಂದ ಮಾಡಿಕೊಳ್ಳಬೇಕು, 500 ಕೋಟಿ ಲಿಫ್ಟ್ ಕೆಲಸಗಳು ನಡೆಯಬೇಕಿದೆ. ಆ ವಿಷಯವಾಗಿ ನಿನ್ನೆ ಕುಮಾರಸ್ವಾಮಿ ಅವರ ಜೊತೆ ಮಾತುಕತೆ ನಡೆಸಿದ್ದೆ.ನನ್ನದೇನಿದ್ದರೂ ಕ್ಷೇತ್ರದ ಅಭಿವೃದ್ಧಿ ವಿಷಯ ಮಾತ್ರ. ಉಳಿದಂತೆ ಯಾವುದೇ ಸಮಸ್ಯೆಗಳಿಲ್ಲ ಎಂದು ಹೇಳಿದರು.

ರಮೇಶ್ ಜಾರಕಿ ಹೊಳಿ ಅವರನ್ನು ಭೇಟಿ ಮಾಡಿದ್ದು, ಸೌಜನ್ಯದ ಭೇಟಿಯಷ್ಟೆ ಎಂದು ಹೇಳಿದರು.

ಆದರೆ ಕಾಂಗ್ರೆಸ್ ನಾಯಕರ ನಡವಳಿಕೆಯಿಂದ ಅಸಮಾಧಾನಗೊಂಡಿರುವ ರಮೇಶ್ ಜಾರಕಿ ಹೊಳಿ ಅವರನ್ನು ಮನವೊಲಿಸಲು ಮಹೇಶ್ ಕುಮಟಳ್ಳಿ ಸಂಧಾನಕಾರರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ರಮೇಶ್ ಜಾರಕಿ ಹೊಳಿ ಅವರ ಬೇಡಿಕೆಗಳನ್ನು ನಿನ್ನೆ ಕುಮಾರಸ್ವಾಮಿಯವರಿಗೆ ತಲುಪಿಸಿದ ಮಹೇಶ್ ಕುಮಟಳ್ಳಿ ಇಂದು ಮತ್ತೊಮ್ಮೆ ರಮೇಶ್ ಜಾರಕಿ ಹೊಳಿ ಅವರನ್ನು ಭೇಟಿ ಮಾಡಿ ಸರ್ಕಾರದ ನಿಲುವುಗಳನ್ನು ವಿವರಿಸಿದ್ದಾರೆ ಎಂದು ಹೇಳಲಾಗಿದೆ.

ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಖುದ್ದಾಗಿ ಸಂಧಾನಕ್ಕೆ ಮುಂದಾಗಿರುವ ಕುಮಾರಸ್ವಾಮಿ, ಆಪ್ತ ಶಾಸಕರಗಳನ್ನು ಬಳಸಿಕೊಂಡು ಸಂಧಾನ ಮಾತುಕತೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ