ಕಾಂಗ್ರೇಸ್ ಸಚಿವರ ಜೊತಗೆ ಮಹತ್ವದ ಸಭೆ ನಡೆಸಲಿರುವ ಹೈಕಮಾಂಡ್

ಬೆಂಗಳೂರು, ಮೇ 28-ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಹಿನ್ನೆಲೆಯಲ್ಲಿ ಸಂಪುಟ ಪುನಾರಚನೆಗೆ ಮುಂದಾಗಿರುವ ಕಾಂಗ್ರೆಸ್ ಹೈಕಮಾಂಡ್ ಇಂದು ಸಂಜೆ ಎಲ್ಲಾ ಸಚಿವರಗಳ ಜೊತೆ ಮಹತ್ವದ ಚರ್ಚೆ ನಡೆಸಲಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಮ್ ನಬಿ ಆಜಾದ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರನ್ನೊಳಗೊಂಡಂತೆ ಕಾಂಗ್ರೆಸ್‍ನ ಸಚಿವರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಮಾತ್ರ ಗೆದ್ದು, ಉಳಿದೆಲ್ಲ ಕ್ಷೇತ್ರದಲ್ಲಿ ಸೋಲು ಕಂಡಿರುವುದು ಒಂದು ಕಡೆಯಾದರೆ, ಕಾಂಗ್ರೆಸ್‍ನ ಅತೃಪ್ತ ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಮುಂದಾಗಿದ್ದಾರೆ.

ಈ ಬೆಳವಣಿಗೆಗಳನ್ನು ನಿಯಂತ್ರಿಸಲು ಸಂಪುಟ ಪುನಾರಚನೆ ಅನಿವಾರ್ಯ ಎಂದು ಹೇಳಲಾಗುತ್ತಿದೆ. ಕೆಲವು ಸಚಿವರನ್ನು ಸಂಪುಟದಿಂದ ಕೈಬಿಟ್ಟು ಅತೃಪ್ತರಿಗೆ ಅವಕಾಶ ನೀಡಿ ಸರ್ಕಾರ ಉಳಿಸಿಕೊಳ್ಳಲು ಹೈಕಮಾಂಡ್ ಮುಂದಾಗಿದೆ.

ಇದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಸಂಪುಟ ಪುನಾರಚನೆಗಿಂತಲೂ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಬೇಕು, ಯಾವುದೇ ಕಾರಣಕ್ಕೂ ಈಗಿರುವ ಸಚಿವರನ್ನು ಕೈಬಿಡಬಾರದು ಎಂದು ಪಟ್ಟು ಹಿಡಿದಿದ್ದಾರೆ.

ನಿನ್ನೆ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿದ ವೇಳೆ ಸರ್ಕಾರ ಉಳಿಸಿಕೊಳ್ಳಬೇಕಾದರೆ ಪುನಾರಚನೆಯಿಂದ ಮಾತ್ರ ಸಾಧ್ಯ.ಒಂದಿಬ್ಬರನ್ನು ಸಚಿವರನ್ನಾಗಿ ಮಾಡಿ ಕೈತೊಳೆದುಕೊಂಡರೆ ಉಳಿದವರು ಬಂಡಾಯವೇಳುತ್ತಾರೆ. ಕನಿಷ್ಠ ಏಳೆಂಟು ಮಂದಿ ಹೊಸಬರಿಗೆ ಸಂಪುಟದಲ್ಲಿ ಅವಕಾಶ ಕೊಟ್ಟು, ಉಳಿದವರಿಗೆ ಮುಂದಿನ ಅವಧಿಯಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿ ಸರ್ಕಾರ ಉಳಿಸಿಕೊಳ್ಳಬಹುದು. ಇಲ್ಲವಾದರೆ ಅತೃಪ್ತರನ್ನು ಸಮಾಧಾನ ಪಡಿಸುವುದು ಕಷ್ಟವಾಗಲಿದೆ. ಬಿಜೆಪಿ ಈಗಾಗಲೇ ಆಕ್ರಮಣಕಾರಿಯಾಗಿ ಅಖಾಡಕ್ಕಿಳಿದಿದೆ. ಈ ಸಂದರ್ಭದಲ್ಲಿ ನಾವು ಅತ್ಯಂತ ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದು, ಸಿದ್ದರಾಮಯ್ಯ ಅವರ ಅಭಿಪ್ರಾಯಕ್ಕೆ ವಿರುದ್ಧವಾಗಿ ಸಂಪುಟ ಪುನಾರಚನೆಗೆ ಮುಂದಾಗಿದೆ ಎಂದು ಹೇಳಲಾಗಿದೆ.

ಆದರೆ ಸಂಪುಟದಿಂದ ಯಾರನ್ನು ಕೈಬಿಡಬೇಕು, ಕೈಬಿಡುವ ಸಚಿವರಿಗೆ ಯಾವ ರೀತಿ ಜವಾಬ್ದಾರಿ ಹಂಚಬೇಕು ಎಂಬ ನಿಟ್ಟಿನಲ್ಲಿ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ.

ಹೀಗಾಗಿ ಸಚಿವರುಗಳ ಜೊತೆ ಚರ್ಚೆ ಮಾಡಿ ಕೆಲವರಿಗೆ ಸ್ವಯಂಪ್ರೇರಿತವಾಗಿ ಹುದ್ದೆ ತ್ಯಾಗ ಮಾಡುವಂತೆ ಸಲಹೆ ನೀಡಲಾಗುತ್ತದೆ. ಅದಕ್ಕೆ ಅವರು ಒಪ್ಪಿಕೊಂಡರೆ ಸಂಪುಟ ವಿಸ್ತರಣೆ ಸುಲಭವಾಗಲಿದೆ.

ಈಗಿರುವ ಸಚಿವರು ಅಧಿಕಾರ ವಹಿಸಿಕೊಂಡು ಕೇವಲ ಒಂದು ವರ್ಷ ಮಾತ್ರ ಆಗಿದೆ. ಅಷ್ಟು ಬೇಗ ಅಧಿಕಾರ ಬಿಟ್ಟುಕೊಡಲು ಅವರು ಮುಂದಾಗುವುದು ಅನುಮಾನದ ವಿಷಯ. ಈ ಸವಾಲನ್ನು ಹೈಕಮಾಂಡ್ ಹೇಗೆ ನಿಭಾಯಿಸುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ.

ಇದೇ ಸಂದರ್ಭದಲ್ಲಿ ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಪರಾಮರ್ಶೆ ನಡೆಯಲಿದೆ ಎಂದು ಹೇಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ