
ಬೆಂಗಳೂರು, ಮೇ 28-ಕುಂದಗೋಳ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ನ ನೂತನ ಶಾಸಕಿ ಕುಸುಮಾ ಶಿವಳ್ಳಿ ಅವರು ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಶುಭಾಶಯ ತಿಳಿಸಿದರು.
ಸಿ.ಎಸ್.ಶಿವಳ್ಳಿ ಅವರ ಪತ್ನಿಯಾಗಿರುವ ಕುಸುಮಾ ಶಿವಳ್ಳಿ ಅವರು ಉಪಚುನಾವಣೆಯಲ್ಲಿ ಜಯಗಳಿಸುವ ಮೂಲಕ ಮೈತ್ರಿಯ ಮರ್ಯಾದೆ ಉಳಿಸಿದ್ದಾರೆ.
ಚಿಂಚೋಳಿ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ಸೋಲು ಕಂಡು ಮುಜುಗರ ಅನುಭವಿಸುವಂತಾಗಿತ್ತು.
ಬಿ.ಕೆ.ಶಿವಕುಮಾರ್ ಅವರ ಉಸ್ತುವಾರಿಯಲ್ಲಿ ನಡೆದ ಕುಂದಗೋಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪ್ರಯಾಸದ ಗೆಲುವು ಸಾಧಿಸಿದೆ. ಇಂದು ಕುಸುಮಾ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮತ್ತಿತರರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಕುಸುಮಾ ಅವರೊಂದಿಗೆ ಅವರ ಕ್ಷೇತ್ರದ ನೂರಾರು ಬೆಂಬಲಿಗರು ಆಗಮಿಸಿದ್ದರು. ಆದರೆ ಕೃಷ್ಣಾದಲ್ಲಿ ಅವರನ್ನು ಒಳಗೆ ಬಿಡದೆ ಸತಾಯಿಸಲಾಗಿತ್ತು.