ಬೆಂಗಳೂರು,ಮೇ 28- ಅತೃಪ್ತರನ್ನು ಮಾತ್ರ ಪರಿಗಣಿಸಿ ನಿಷ್ಠಾವಂತರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿರುವ ಶಾಸಕ ಅಜಯ್ ಸಿಂಗ್ ಅವರು ತಮಗೂ ಸಚಿವ ಸ್ಥಾನ ನೀಡಬೇಕೆಂದು ವರಿಷ್ಠರನ್ನು ಆಗ್ರಹಿಸಿದ್ದಾರೆ.
ದೆಹಲಿಯಲ್ಲಿ ರಾಜ್ಯದ ವಿಶೇಷ ಪ್ರತಿನಿಧಿಯಾಗಿರುವ ಅವರು, ಸುದ್ದಿಗಾರರೊಂದಿಗೆ ಮಾತನಾಡಿ ಬಂಡಾಯ ಶಾಸಕರಿಗಷ್ಟೇ ಸಚಿವ ಸ್ಥಾನದ ಆಫರ್ ನೀಡಲಾಗುತ್ತಿದೆ. ನಿಷ್ಟಾವಂತ ಶಾಸಕರನ್ನು ಕಡೆಗಣಿಸಲಾಗುತ್ತಿದೆ.ಅವರಂತೆ ನಮ್ಮನ್ನು ಪರಿಗಣಿಸಿ ನಮಗೂ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಪುತ್ರರಾದ ಅಜಯ್ ಸಿಂಗ್ ಅವರು ಜೇವರ್ಗಿ ಕ್ಷೇತ್ರದ ಶಾಸಕರು. ಕಳೆದ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕಾಗಿತ್ತು. ಸಾಧ್ಯವಾಗದ ಹಿನ್ನೆಲೆಯಲ್ಲಿ ದೆಹಲಿ ವಿಶೇಷ ಪ್ರತಿನಿಧಿಯಾಗಿ ನೇಮಿಸಲಾಗಿತ್ತು. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅವರಿಗೆ ಅಸಮಾಧಾನ ಇದ್ದೇ ಇತ್ತು. ಖರ್ಗೆಯವರ ಪುತ್ರ ಪ್ರಿಯಾಂಕ ಖರ್ಗೆಯವರಿಗೆ ಸಚಿವ ಸ್ಥಾನ ಸಿಕ್ಕಿದ್ದು ಅಜೆಯ್ ಸಿಂಗ್ ಅವರಿಗೆ ಸಿಕ್ಕಿರಲಿಲ್ಲ.
ಈಗ ಅತೃಪ್ತರ ಬಂಡಾಯ ಶಮನಗೊಳಿಸಲು ಸಂಪುಟ ಪುನರ್ರಚನೆಗೆ ಸರ್ಕಾರ ಮುಂದಾಗಿದೆ ಎಂದು ತಿಳಿದು ಬರುತ್ತಿದ್ದಂತೆ ದೆಹಲಿಯಿಂದ ಬೆಂಗಳೂರಿಗೆ ದೌಡಾಯಿಸಿರುವ ಅಜಯ್ ಸಿಂಗ್ ಅವರು ತಮಗೂ ಒಂದು ಛಾನ್ಸ್ ಕೊಡಿ ಎಂದು ಮುಖಂಡರಲ್ಲಿ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.