ಬೆಂಗಳೂರು,ಮೇ 28- ಬಳ್ಳಾರಿಯ ಸಂಡೂರು ತಾಲ್ಲೂಕಿನಲ್ಲಿ ಜೆಎಸ್ಡಬ್ಲ್ಯು ಸ್ಟೀಲ್ ಸಂಸ್ಥೆಗೆ ಸರ್ಕಾರ ಭೂಮಿ ನೀಡಲು ಕೈಗೊಂಡಿರುವ ನಿರ್ಣಯವನ್ನು ರದ್ದುಪಡಿಸಬೇಕೆಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಇಂದಿಲ್ಲಿ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಆ ಸಂಸ್ಥೆ(ಜಿಂದಾಲ್)ಗೆ ಭೂಮಿ ನೀಡಿರುವ ನಿರ್ಣಯವನ್ನು ಕೈಗೊಳ್ಳಲಾಗಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಈ ನಿರ್ಣಯ ಸರಿಯಲ್ಲ ಎಂದರು.
ಇಲ್ಲದಿದ್ದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ರಾಜ್ಯದ ಹಿತಕ್ಕೆ ಮಾರಕವಾಗಿ ಕರಾಳ ನಿರ್ಣಯವನ್ನು ಕೈಗೊಂಡಂತಾಗುತ್ತದೆ ಎಂದು ಆರೋಪಿಸಿದರು.
ಬಳ್ಳಾರಿಯ ಸೊಂಡೂರು ತಾಲ್ಲೂಕಿನ ಕುರೆಕುಪ್ಪದಲ್ಲಿ ಸುಮಾರು 2 ಸಾವಿರ ಎಕರೆ, ಎರವನಹಳ್ಳಿ ಗ್ರಾಮದಲ್ಲಿ ಸುಮಾರು 1666 ಎಕರೆ ಭೂಮಿಯನ್ನು ಲೀಸ್ನಿಂದ ಬದಲಾಯಿಸಿ ಕ್ರಯಪತ್ರ ಮಾಡಿಕೊಳ್ಳಲು ಸಂಪುಟ ಅನುಮೋದನೆ ನೀಡಿದೆ. ಇದು ರಾಜ್ಯದ ಹಿತಕ್ಕೆ ಧಕ್ಕೆಯಾಗಿದೆ ಎಂದರು.
ಈಗಾಗಲೇ ಮುಖ್ಯಮಂತ್ರಿಗೆ ಪತ್ರ ಬರೆದು ಜಿಂದಾಲ್ಗೆ ಭೂಮಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಬಾರದು ಎಂದು ಮನವರಿಕೆ ಮಾಡಿದ್ದೆ. ಅವರಿಗೆ ಮನವರಿಕೆಯಾಗಿದೆಯೋ ಇಲ್ಲವೊ ಗೊತ್ತಿಲ್ಲ. ಕಾನೂನು ಇಲಾಖೆಯ ರಾಜ್ಯದ ಹಿತಕ್ಕೆ ಧಕ್ಕೆಯಾಗಲಿದೆ ಎಂದು ಹೇಳಿತ್ತು.ಆದರೂ ಭೂಮಿ ನೀಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.