ಬೆಂಗಳೂರು, ಮೇ 28- ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರನ್ನು ಕರ್ನಾಟಕದಿಂದ ರಾಜ್ಯಸಭೆ ಅಥವಾ ಲೋಕಸಭೆಗಾಗಲಿ ಆಯ್ಕೆ ಮಾಡಬೇಕು.
ಇಲ್ಲದಿದ್ದರೆ ನಮ್ಮ ಸಂಘಟನೆಯ ಸದಸ್ಯರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಒಕ್ಕಲಿಗರ ಜಾಗೃತಿ ವೇದಿಕೆ ಎಚ್ಚರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಕೆ.ಸಿ.ಗಂಗಾಧರ್, ತುಮಕೂರು ಲೋಕಸಭೆ ಚುನಾವಣೆ ಸೋಲಿನಿಂದ ಹೆಚ್.ಡಿ.ದೇವೇಗೌಡರಿಗೆ ತುಂಬ ನೋವಾಗಿದೆ.ಲೋಕಸಭೆ ಫಲಿತಾಂಶದಿಂದ ನಮ್ಮ ರಾಜ್ಯದ ಸಮಸ್ಯೆಗಳ ಬಗ್ಗೆ ದೆಹಲಿಯಲ್ಲಿ ಧ್ವನಿ ಎತ್ತುವವರು ಇಲ್ಲದಾಂತಾಗಿದೆ ಎಂದರು.
ಹಾಗಾಗಿ ಹಿರಿಯ, ಸಜ್ಜನ ರಾಜಕಾರಣಿಯಾದ ದೇವೇಗೌಡರನ್ನು ದೆಹಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದ ಅವರು, ಈ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುತ್ತೇವೆ ಎಂದು ತಿಳಿಸಿದರು.
ಇನ್ನ್ನು ಮೋದಿ ಅಲೆಯಿಂದ ಗುಂಪಲ್ಲಿ ಗೋವಿಂದ ಎನ್ನುವಂತೆ ಬಿಜೆಪಿ ನಾಯಕರು ಗೆಲುವು ಸಾಧಿಸಿದ್ದಾರೆ.ಕೆಲ ಬಿಜೆಪಿ ನಾಯಕರು ದೇವೇಗೌಡ ಬಗ್ಗೆ ಏಕವಚನದಲ್ಲಿ ಮಾತಾಡುತ್ತಿದ್ದಾರೆ.ಇದನ್ನು ಮೊದಲು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.
ಇಡೀ ರಾಜ್ಯಕ್ಕೆ ಅಲ್ಲದೆ ದೇಶಕ್ಕೆ ದೇವೇಗೌಡರು ಸೇವೆ ಸಲ್ಲಿಸಿದ್ದಾರೆ. ಹೇಮಾವತಿ, ಕಾವೇರಿ, ಕೃಷ್ಣ ಮೇಲ್ದಂಡೆ ಯೋಜನೆಗಳಲ್ಲಿ ಅವರ ಸೇವೆ ಅಪಾರವಾದದ್ದು.
ಪ್ರಧಾನಿ ಮೋದಿಯ ಬಳಿ ನೇರವಾಗಿ ರಾಜ್ಯದ ಸಮಸ್ಯೆಗಳ ಬಗ್ಗೆ ಮಾತನಾಡುವ ಏಕೈಕ ವ್ಯಕ್ತಿ ಎಂದರೆ ಅದು ದೇವೇಗೌಡರು ಹಾಗಾಗಿ ರಾಜ್ಯ ಸರ್ಕಾರ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆ ಕಾರ್ಯಾಧ್ಯಕ್ಷ ಯತಿರಾಜ್, ಶ್ರೀನಿವಾಸ್ ಉಪಸ್ಥಿತಿದ್ದರು.