ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸತತ ಎರಡನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ವಿಜಯ ಸಾಧಿಸಿದೆ. ಈ ಮೂಲಕ ವಿಪಕ್ಷ ನಾಯಕರನ್ನು ದಂಗುಬಡಿಸಿದೆ. ಈ ಅಭೂತಪೂರ್ವ ಜಯದ ನಂತರ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಬಿಜೆಪಿ ಹಿರಿಯ ನಾಯಕ ಎಲ್ಕೆ ಆಡ್ವಾಣಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ಬಿಜಪಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಎಲ್ಕೆ ಆಡ್ವಾಣಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಪ್ರಮುಖ ಪಾತ್ರವಹಿಸಿದ್ದರು. ಈ ಹಿನ್ನೆಲೆಯಲ್ಲಿ ಎರಡನೇ ಬಾರಿ ಅಧಿಕಾರ ಸ್ವೀಕರಿಸಿತ್ತಿರುವುದಕ್ಕೆ ಮೋದಿ ಹಾಗೂ ಅಮಿತ್ ಶಾ ಅವರು ಆಡ್ವಾಣಿ ಮನೆಗೆ ತೆರಳಿದ್ದಾರೆ. ಈ ಬಗ್ಗೆ ಮೋದಿ ಟ್ವೀಟ್ ಮಾಡಿದ್ದಾರೆ.
“ದಶಕಗಳ ಕಾಲ ಆಡ್ವಾಣಿಯಂಥ ನಾಯಕರು ಪಕ್ಷ ಕಟ್ಟಿದ್ದಕ್ಕೆ ಹಾಗೂ ಹೊಸ ಆಲೋಚನೆಗಳನ್ನು ನೀಡಿದ್ದಕ್ಕೆ ಇಂದು ಪಕ್ಷ ಯಶಸ್ಸಿನ ಹಂತ ತಲುಪಿದೆ,” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಇದರ ಜೊತೆಗೆ ಆರ್ಎಸ್ಎಸ್ ಹಿರಿಯ ನಾಯಕ ಮುರುಳಿ ಮನೋಹರ್ ಜೋಶಿ ಅವರನ್ನೂ ಮೋದಿ ಭೇಟಿ ಮಾಡಿದ್ದಾರೆ. “ಭಾರತದ ಶಿಕ್ಷಣವನ್ನು ಉನ್ನತಮಟ್ಟಕ್ಕೆ ಕರೆದೊಯ್ಯಲು ಮುರುಳಿ ಮನೋಹರ್ ಜೋಶಿ ಕೊಡುಗೆ ಅಪಾರ. ಪಕ್ಷದ ಬಲವರ್ಧನೆಗೆ ಅವರು ಸದಾ ದುಡಿಯುತ್ತಾರೆ. ನನ್ನನ್ನು ಸೇರಿದಂತೆ ಬಿಜೆಪಿಯ ಅನೇಕ ಕಾರ್ಯಕರ್ತರಿಗೆ ಅವರು ಮೆಂಟರ್. ಇಂದು ಬೆಳಿಗ್ಗೆ ಅವರ ಆಶೀರ್ವಾದ ಪಡೆದಿದ್ದೇನೆ,” ಎಂದು ಮೋದಿ ಬರೆದುಕೊಂಡಿದ್ದಾರೆ.