ಬೆಂಗಳೂರು: ಹಾಸನ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿರುವ ಪ್ರಜ್ವಲ್ ರೇವಣ್ಣ ಹೇಳಿಕೆಗೆ ಪ್ರತಿಕ್ರಿಯೆ ನಿಡಿರುವ ಬಿಜೆಪಿ ಶಾಸಕ ಪ್ರೀತಂ ಗೌಡ ಮೊದಲು ರಾಜೀನಾಮೆ ಕೊಟ್ಟು ಬಳಿಕ ಮಾತನಾಡಲಿ ಎಂದಿದ್ದಾರೆ.
ಹಾಸನದ ಜನರು ದೇವೇಗೌಡರು ತಮ್ಮ ಪಕ್ಷದಿಂದ ನಿಲ್ಲಬೇಕು ಎಂದು ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ ಅದನ್ನು ಮೀರಿ ಕುಟುಂಬದ ವ್ಯವಸ್ಥೆಗೋಸ್ಕರ ದೇವೇಗೌಡರನ್ನು ಹಾಸನದಿಂದ ಬೇರೆಡೆಗೆ ವಲಸೆ ಹೋಗುವಂತೆ ರೇವಣ್ಣ, ಭವಾನಿ ಮತ್ತು ಪ್ರಜ್ವಲ್ ರೇವಣ್ಣ ಮಾಡಿದ್ದಾರೆ. ಈ ಕಾರಣಕ್ಕೆ ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ಈಗ ರಾಜೀನಾಮೆ ನೀಡುವ ಮಾತನಾಡುತ್ತಿದ್ದಾರೆ ಎಂದರು.
ಕುಟುಂಬ ರಾಜಕಾರಣವನ್ನು ಜಿಲ್ಲೆಯ ಜನರು ಕ್ಷಮಿಸಲ್ಲ. ಯಾಕೆಂದರೆ ಅವರ ಸ್ವಾರ್ಥಕ್ಕಾಗಿ ಈ ವಯಸ್ಸಿನಲ್ಲಿ ದೇವೇಗೌಡರಿಗೆ ಸೋಲನ್ನು ಅನುಭವಿಸುವ ಪರಿಸ್ಥಿತಿಯನ್ನು ತಂದಿದ್ದಾರೆ. ಈಗ ಅದನ್ನು ತಿದ್ದಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಜೊತೆಗೆ ಮೂರು ತಿಂಗಳ ನಂತರ ಅಫಿಡವಿಟ್ ಸಮಸ್ಯೆ ಇರುವುದರಿಂದ ತಮ್ಮ ಸ್ಥಾನ ಕಳೆದುಕೊಳ್ಳುವ ಮುಂಚೆಯೇ ಆ ಸ್ಥಾನವನ್ನು ತಾತನಿಗೆ ಬಿಟ್ಟುಕೊಡಲು, ತಾನೇ ರಾಜೀನಾಮೆ ಕೊಟ್ಟು ಗೌರವ ಉಳಿಸಿಕೊಳ್ಳೋಣ ಎಂದು ಈ ರೀತಿ ಮಾಡಿದ್ದಾರೆ ಎಂದರು.
ದೇವೇಗೌಡರ ಕರ್ಮಭೂಮಿ ಹಾಸನ. ಅಲ್ಲಿಯೇ ಸ್ಪರ್ಧೆ ಮಾಡಲು ಅವರಿಗೆ ಅವಕಾಶ ಕೊಡಲಿಲ್ಲ. ದೇವೇಗೌಡರಿಗೆ ಹಾಸನ ಬಿಟ್ಟು ಹೋಗಲು ಇಷ್ಟವಿರಲಿಲ್ಲ. ಅವರ ಮನಸ್ಸನ್ನು ನೋಯಿಸಿ ಕಳುಹಿಸಿದ್ದರು. ಮುಂದಿನ ಚುನಾವಣೆಯಲ್ಲಿ ಅವರಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಈಗ ರಾಜೀನಾಮೆ ಕೊಡುವ ಮಾತನಾಡುತ್ತಿದ್ದಾರೆ ಎಂದು ಪ್ರೀತಂಗೌಡ ಹೇಳಿದ್ದಾರೆ.
Hasana,prajwal revanna,bjp mla pritam gowda