ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಚ್.ಕೆ. ಪಾಟೀಲ್​

ಬೆಂಗಳೂರುಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್​ ನಾಯಕರು ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ಹೊರಲು ಸಿದ್ಧರಾಗಿದ್ಧಾರೆ. ಇಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಎಚ್​.ಕೆ.ಪಾಟೀಲ್​ ರಾಜೀನಾಮೆ ನೀಡಿದ್ದಾರೆ.

ಎಚ್​.ಕೆ.ಪಾಟೀಲ್​ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರಿಗೆ ರಾಜೀನಾಮೆ ಪತ್ರ ಬರೆದಿದ್ಧಾರೆ. ತಮ್ಮ ರಾಜೀನಾಮೆ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು,”ರಾಜ್ಯದಲ್ಲಿ ಈ ಬಾರಿಯ ಚುನವಾಣೆಯಲ್ಲಿ ಕಾಂಗ್ರೆಸ್​​ಗೆ ಹಿನ್ನಡೆಯಾಗಿದೆ. ಈ ಸೋಲಿನ ನೈತಿಕ ಹೊಣೆಯನ್ನು ಹೊತ್ತು ನಾನು ರಾಜೀನಾಮೆ ನೀಡುತ್ತಿದ್ದೇನೆ” ಎಂದು ಹೇಳಿದ್ದಾರೆ.

“ಸೋಲಿನ ನೈತಿಕ ಹೊಣೆ ಹೊತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ದೊಡ್ಡ ಸೋಲಿನ ಆತ್ಮಾವಲೋಕನ ಮಾಡಬೇಕಿದೆ.

ಜೆಡಿಎಸ್ ಜೊತೆಗಿನ ಮೈತ್ರಿ ದುಬಾರಿ ಆಯ್ತಾ ಎನ್ನುವುದರ ಕುರಿತು ಚರ್ಚೆ ನಡೆಯಬೇಕಿದೆ” ಎಂದು ನ್ಯೂಸ್​ 18 ಕನ್ನಡಕ್ಕೆ ಎಚ್​.ಕೆ.ಪಾಟೀಲ್​​ ತಿಳಿಸಿದ್ದಾರೆ.

ಇನ್ನು, ರಾಜ್ಯದಲ್ಲಿ ಮೈತ್ರಿ ಮುಂದುವರೆಯಬೇಕಾ ಬೇಡವಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ಮೈತ್ರಿ ಮುಂದುವರಿಯಬೇಕಾ ಎನ್ನುವುದಕ್ಕೆ ಕಾಲವೇ ಉತ್ತರಿಸಲಿದೆ. ಎರಡೂ ಕಡೆಯವರು ಕುಳಿತು ಈ ಬಗ್ಗೆ ಚರ್ಚಿಸಬೇಕಾಗಿದೆ. ಈ ಫಲಿತಾಂಶ ರಾಜ್ಯ ಸರ್ಕಾರಕ್ಕೂ ಶಾಕ್ ಕೊಟ್ಟಿದೆ. ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಿದ್ದಾರೆ. ಮೈತ್ರಿ ಸರ್ಕಾರ ಬಹಳ ದಿನ‌ ಮುಂದುವರಿಯಲ್ಲ” ಎಂದು ಪರೋಕ್ಷವಾಗಿ ಒಪ್ಪಿಕೊಂಡರು.

ಇದೇ ವರ್ಷ ಜನವರಿಯಲ್ಲಿ ಎಚ್​.ಕೆ.ಪಾಟೀಲ್​ ಅವರಿಗೆ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು. ನಿನ್ನೆ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಕೂಡ ಸೋಲಿನ ಹೊಣೆಯನ್ನು ಹೊರುವುದಾಗಿ ಹೇಳಿದ್ದರು. ಅವಶ್ಯಕತೆ ಬಿದ್ದರೆ ರಾಜೀನಾಮೆಗೂ ಸಿದ್ಧ ಎಂದಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ