ಬೆಂಗಳೂರು, ಮೇ 24-ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ನೆಲಕಚ್ಚಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಲು ಮೋದಿ ಅಲೆ ಒಂದು ಕಡೆಯಾದರೆ, ದೋಸ್ತಿಗಳಲ್ಲಿನ ಒಳಜಗಳ ಪ್ರಮುಖ ಕಾರಣವಾಗಿದೆ.
ಕಳೆದ ಒಂದು ವರ್ಷದ ಹಿಂದೆ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಮೇಲ್ನೋಟಕ್ಕೆ ಮೈತ್ರಿಕೊಂಡಿದ್ದವೆಯೋ ಹೊರತು ಆಂತರಿಕವಾಗಿ ಕಚ್ಚಾಡುತ್ತಲೇ ಇದ್ದವು. ಸಿದ್ದರಾಮಯ್ಯ, ದೇವೇಗೌಡ, ಕುಮಾರಸ್ವಾಮಿ ಎಲ್ಲರೂ ಒಂದೇ ವೇದಿಕೆಯಲ್ಲಿ ಕುಳಿತುಕೊಂಡಿದ್ದರೂ ಅವರಲ್ಲಿ ಸಾಮರಸ್ಯ ಮಾತುಗಳು ಕಂಡುಬರುತ್ತಿರಲಿಲ್ಲ.
ಇನ್ನು ಕೆಲಹಂತದಲ್ಲಂತೂ ಕಾರ್ಯಕರ್ತರು ಒಂದಾಗಲೇ ಇಲ್ಲ. ಮೊದಲ ಹಂತದ ಚುನಾವಣೆ ಹಳೇ ಮೈಸೂರು ಭಾಗದಲ್ಲಿ ನಡೆದಿತ್ತು. ಜೆಡಿಎಸ್ ಪ್ರಾಬಲ್ಯವಿರುವ ಈ ಭಾಗದಲ್ಲಿ ಕಾಂಗ್ರೆಸ್-ಜೆಡಿಎಸ್ ನಾಯಕರು ಒಟ್ಟಾಗಿ ಪ್ರಚಾರ ಮಾಡಿದರು. ಕಾಂಗ್ರೆಸ್ಸಿಗರಂತೂ ಜೆಡಿಎಸ್ ಕ್ಷೇತ್ರಗಳಲ್ಲಿ ಟೊಂಕ ಕಟ್ಟಿ ನಿಂತು ದುಡಿಮೆ ಮಾಡಿದರು. ಆದರೆ ಇದೇ ರೀತಿಯ ಬದ್ಧತೆಯ ಹೋರಾಟ ಎರಡನೇ ಹಂತದ ಚುನಾವಣೆ ನಡೆದ ಉತ್ತರ ಕರ್ನಾಟಕ ಭಾಗದಲ್ಲಿ ಕಾಣಲಿಲ್ಲ. ಬಿಜೆಪಿಯ ಪ್ರಬಲ ಕೋಟೆಯಾಗಿದ್ದ ಆ ಭಾಗದಲ್ಲಿ ಕಾಂಗ್ರೆಸ್ ನಾಯಕರ ಜೊತೆ ಜೆಡಿಎಸ್ ನಾಯಕರು ಸಾಥ್ ಕೊಡಲೇ ಇಲ್ಲ.
ಇನ್ನು ಹೋದಲ್ಲಿ ಬಂದಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಕುಮಾರಸ್ವಾಮಿ ಆಡಳಿತವನ್ನು ಟೀಕಿಸದೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಬೇಕೆಂದು ಹೇಳುವ ಮೂಲಕ ಪರೋಕ್ಷವಾಗಿ ಸಮ್ಮಿಶ್ರ ಸರ್ಕಾರದ ಕಾಲೆಳೆಯಲಾರಂಭಿಸಿದರು.