
ಉಡುಪಿ: ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಳೆದ ಬಾರಿಗಿಂತಲೂ ಹೆಚ್ಚಿನ ಅಂತರದಲ್ಲಿ ಗೆಲ್ಲುತ್ತೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಲೋಕಸಭಾ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅಂಬಲಪಾಡಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಎರಡು ಲಕ್ಷ ಅಂತರವನ್ನು ಕಾಯ್ದುಕೊಳ್ಳಲು ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಪ್ರತಿ ಬೂತ್ನಲ್ಲೂ ಅದಕ್ಕಾಗಿ ಶ್ರಮ ಪಟ್ಟಿದ್ದಾರೆ. ಉತ್ಸಾಹದಲ್ಲಿ ನಮ್ಮ ನಾಯಕರು ಓಡಾಡಿದ್ದಾರೆ. ಕಳೆದ ಬಾರಿಯ ಅಂತರ ಮೀರಿ ಗೆಲ್ಲುತ್ತೇವೆ. ಪ್ರಮೋದ್ ಮಧ್ವರಾಜ್ ಅವರನ್ನು ಸೀರಿಯಸ್ ಆಗಿ ತೆಗೆದುಕೊಂಡಿದ್ದೆವು. ಈ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದವರು. ಆದರೆ ಅವರು ಸೋಲಲಿದ್ದಾರೆ ಎಂದರು.
ಕಳೆದ ಬಾರಿ ಮೂರು ಪಕ್ಷಗಳ ಅಭ್ಯರ್ಥಿಗಳು ಇದ್ದೆವು. ತ್ರಿಕೋನ ಸ್ಪರ್ಧೆಯಿತ್ತು. ಆದರೆ, ಈ ಬಾರಿ ರಾಜ್ಯದ ಎಲ್ಲ ಕಡೆ ನೇರ ಸ್ಪರ್ಧೆಯಿತ್ತು. ಈ ಕಾರಣಕ್ಕೆ ನಮ್ಮ ಕಾರ್ಯಕರ್ತರು ಬಹಳ ಸೀರಿಯಸ್ ಆಗಿ ಕೆಲಸ ಮಾಡಿದ್ದಾರೆ. ಪ್ರಾರಂಭದಲ್ಲಿ ಕಾರ್ಯಕರ್ತರಿಗೆ ಅಸಮಾಧಾನವಿತ್ತು. ಕೆಲವು ಸಾರಿ ನಾನು ಕ್ಷೇತ್ರಕ್ಕೆ ಬಂದಿದ್ದು ಇನ್ನೊಬ್ಬರಿಗೆ ಗೊತ್ತಾಗುತ್ತಿರಲಿಲ್ಲ. ಮುಂದಿನ ದಿನದಲ್ಲಿ ಜಿಲ್ಲಾ ಟೀಂ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಇನ್ನು ವಾರದಲ್ಲಿ ಒಂದು ದಿನ ಕಡ್ಡಾಯವಾಗಿ ನನ್ನ ಲೋಕಸಭಾ ಕ್ಷೇತ್ರದಲ್ಲಿ ಇರುತ್ತೇನೆ. ಅದು ಯಾವ ದಿನ ಎಂದು ಮುಂದೆ ನಿಗದಿ ಮಾಡಲಾಗುವುದು. ಮುಂದಿನ ಬೆಳವಣಿಗೆ ನೋಡಿಕೊಂಡು ತೀರ್ಮಾನ. ಕಳೆದ ಬಾರಿ ಚೊಚ್ಚಲ ಸಂಸದೆಯಾಗಿದ್ದೆ. ದೇಶದಲ್ಲಿ ಯಾವ ಯಾವ ನಾಯಕರು ಹೇಗೆ ಇದ್ದಾರೆ. ಅವರ ಪಕ್ಷಗಳ ತಾರ್ಕಿಕ ಪ್ರಚಾರ ಏನು ಹೇಗೆ ಮಾತನಾಡುತ್ತಾರೆ, ಅವರ ವಿಚಾರ ಏನು ಎಂಬುದನ್ನು ತಿಳಿದಿದ್ದೇನೆ. ಹೆಚ್ವು ಪ್ರಶ್ನೆ ಕೇಳುವ ಮೂಲಕ ಕ್ಷೇತ್ರದ ರಾಜ್ಯದ ಸಮಸ್ಯೆಗಳಿಗೆ ಉತ್ತರ ಕಂಡುಕೊಂಡಿದ್ದೇನೆ. ಈ ಬಾರೀ ಹೆಚ್ಚು ಅನುಭವ ಆಗಿದೆ ಎಂದರು.
ಕರ್ನಾಟಕದಲ್ಲಿ ಇಪ್ಪತ್ತೆರಡು ಸ್ಥಾನ ಗೆಲ್ಲುತ್ತೇವೆ. ನಾಯಕರಾದ ಯಡಿಯೂರಪ್ಪನವರು ಇದನ್ನು ಹೇಳುತ್ತಾ ಬಂದಿದ್ದಾರೆ. ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಬಿಜೆಪಿ ಸೀಟು ಕರ್ನಾಟಕದಿಂದ ಆಯ್ಕೆಯಾಗಲಿದೆ. ಫಲಿತಾಂಶದ ಎಫೆಕ್ಟ್ ಮೈತ್ರಿ ಸರ್ಕಾರದ ಮೇಲೆ ಮೊನ್ನೆಯಿಂದ ಶುರುವಾಗಿದೆ ಎಂದರು.