ಬೆಂಗಳೂರು, ಮೇ 23-ಲೋಕಸಭೆ ಚುನಾವಣೆಯಲ್ಲಿ ಮತದಾರರು ನೀಡಿರುವ ತೀರ್ಪಿಗೆ ತಲೆಬಾಗುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು, ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸ್ವೀಕಾರ ಮಾಡಲಿಲ್ಲ ಎಂದರು.
ದೇವೇಗೌಡರ ಬಳಿ ರಾಜೀನಾಮೆ ನೀಡುವ ಕುರಿತಂತೆ ಚರ್ಚೆ ಮಾಡಿ ನಂತರ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.
ಏಕಾಂಗಿಯಾಗಿ ಸ್ಪರ್ಧೆ ಮಾಡಬೇಕೆಂಬ ತೀರ್ಮಾನವಾಗಿತ್ತು. ಆದರೆ ನಾಯಕರು ತೆಗೆದುಕೊಂಡ ತೀರ್ಮಾನದಂತೆ ನಡೆದುಕೊಳ್ಳಬೇಕಾಯಿತು. ಒಂದು ಕುಟುಂಬದಲ್ಲಿ ಸೋಲಾಗುವುದು ಹೊಸತೇನಲ್ಲ, ಅದನ್ನು ಸ್ವೀಕರಿಸಬೇಕಷ್ಟೆ. ಇದು ಕೊನೆಯ ಚುನಾವಣೆಯಲ್ಲ. ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಚುನಾವಣೆಯ ಸೋಲಿನ ಹೊಣೆಯನ್ನು ಯಾರಾದರೂ ಹೊರಲೇಬೇಕು ಎಂದು ಹೇಳಿದರು.
ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡಲಾಗಲೇ ಈ ರೀತಿಯ ಫಲಿತಾಂಶವನ್ನು ಅಂದಾಜು ಮಾಡಿದ್ದೆ. ಆದರೆ ಇಷ್ಟು ಕೆಟ್ಟ ಫಲಿತಾಂಶ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 8 ಶಾಸಕರು, ಸಚಿವರು ಇರಬಹುದು. ಆದರೆ ಚುನಾವಣೆಯಲ್ಲಿ ಮತ ಚಲಾಯಿಸುವವರು ಮತದಾರರೇ ಹೊರತು ಜನಪ್ರತಿನಿಧಿಗಳಲ್ಲ ಎಂದು ತಿಳಿಸಿದರು.