ಕರ್ನಾಟಕದ ಇತಿಹಾಸದಲ್ಲೇ ಕಳಪೆ ಸಾಧನೆ ಮಾಡಿದ ಕಾಂಗ್ರೇಸ್

ಬೆಂಗಳೂರು, ಮೇ 23- ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಕಾಂಗ್ರೆಸ್ ಕರ್ನಾಟಕದಲ್ಲಿ ಅತ್ಯಂತ ಕಳಪೆ ಸಾಧನೆ ಮಾಡಿದ್ದು, ಲೋಕಸಭೆ ಚುನಾವಣೆಯಲ್ಲಿ ಸೋತು ನೆಲೆ ಕಳೆದುಕೊಳ್ಳುವ ಮಟ್ಟಕ್ಕೆ ತಲುಪಿದೆ.

ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ದಿನೇಶ್‍ಗುಂಡೂರಾವ್ ಅವರಂತಹ ಘಟಾನುಘಟಿ ನಾಯಕರಿಗೆ ಲೋಕಸಭೆ ಚುನಾವಣೆ ಫಲಿತಾಂಶ ಮುಖಭಂಗ ಮಾಡಿದೆ.

ಆಡಳಿತಾರೂಢ ಸರ್ಕಾರದ ಭಾಗವಾಗಿದ್ದರೂ, ಹೀನಾಯ ಸಾಧನೆ ಮಾಡಿ ಮಹಾತ್ಮ ಗಾಂಧೀಜಿ ಕನಸಿನಂತೆ ಸ್ವಯಂ ಪ್ರೇರಿತವಾಗಿ ವಿಸರ್ಜನೆಗೊಳ್ಳುವಂತಹ ಹಂತಕ್ಕೆ ಕಾಂಗ್ರೆಸ್ ತಲುಪಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2009ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ 6 ಸ್ಥಾನಗಳನ್ನು ಗೆದ್ದು ಮರ್ಯಾದೆ ಉಳಿಸಿಕೊಂಡಿತ್ತು. ಆದರೆ ಇದೇ ಮೊದಲ ಬಾರಿಗೆ 3ನೇ ಸ್ಥಾನಕ್ಕೆ ಕುಸಿಯುವ ಮೂಲಕ 1952ರ ಚುನಾವಣಾ ಇತಿಹಾಸದಲ್ಲೇ ಕಳಪೆ ಸಾಧನೆ ಮಾಡಿದೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿಯನ್ನು ಸರ್ಕಾರ ರಚನೆಗಷ್ಟೇ ಸೀಮಿತ ಗೊಳಿಸದೆ ಲೋಕಸಭಾ ಚುನಾವಣೆಗೂ ವಿಸ್ತರಿಸಲಾಗಿತ್ತು. ಎರಡು ಪಕ್ಷಗಳ ಶಕ್ತಿಯನ್ನು ಕ್ರೂಢೀಕರಿಸಿದರೆ. ಬಿಜೆಪಿಯನ್ನು ಸೋಲಿಸಬಹುದು ಎಂಬ ದೋಸ್ತಿಗಳ ಲೆಕ್ಕಾಚಾರ ಈಗ ತಲೆ ಕೆಳಗಾಗಿದೆ.

2004ರಲ್ಲಿ ಬಿಜೆಪಿ 18, ಕಾಂಗ್ರೆಸ್ 8, ಜೆಡಿಎಸ್ 2ಸ್ಥಾನಗಳನ್ನು ಗೆದ್ದಿತ್ತು. 2009ರ ಚುನಾವಣೆಯಲ್ಲಿ ಬಿಜೆಪಿ 19, ಕಾಂಗ್ರೆಸ್ 6, ಜೆಡಿಎಸ್ 3ಸ್ಥಾನಗಳನ್ನು ಗೆದ್ದಿತ್ತು.

ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದರೆ 2014ರಲ್ಲಿ ಕಾಂಗ್ರೆಸ್‍ನ ಮತಗಳಿಕೆ ಶೇ. 3.15ರಷ್ಟು ಹೆಚ್ಚಳವಾಗಿದ್ದರೂ. ಸ್ಥಾನ ಗಳಿಕೆಯಲ್ಲಿ 3ಕ್ಷೇತ್ರಗಳು ಹೆಚ್ಚಾಗಿದ್ದವು, ಬಿಜೆಪಿ 3, ಜೆಡಿಎಸ್ 1ಸ್ಥಾನವನ್ನು ಕಳೆದುಕೊಂಡಿದ್ದವು.

2014ರ ಚುನಾವಣೆಯಲ್ಲಿ ಬಿಜೆಪಿ 17, ಕಾಂಗ್ರೆಸ್ 9(1), ಜೆಡಿಎಸ್ 2 ಸ್ಥಾ ನಗಳನ್ನು ಪಡೆದಿತ್ತು.

ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಶೇ. 43ರಷ್ಟು, ಕಾಂಗ್ರೆಸ್ ಶೇ. 40.80ರಷ್ಟು, ಜೆಡಿಎಸ್ ಶೇ. 11ರಷ್ಟು ಮತಗಳಿಸಿತ್ತು.

ಜೆಡಿಎಸ್-ಕಾಂಗ್ರೆಸ್ ಎರಡು ಪಕ್ಷ ಒಗ್ಗೂಡಿದರೆ ರಾಜ್ಯದಲ್ಲಿ ಭಾರಿ ಶಕ್ತಿ ಕ್ರೋಢಿಕರಣಗೊಳ್ಳುತ್ತದೆ. ಕನಿಷ್ಠ 18ರಿಂದ 20ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳು ಗೆಲ್ಲಬಹುದೆಂಬ ಲೆಕ್ಕಾಚಾರಗಳಿದ್ದವು. ಆದರೆ ಎಲ್ಲವೂ ಫ್ಲಾಪ್ ಶೋ ಆಗಿವೆ.

120ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್ 3ಸ್ಥಾನಗಳಲ್ಲಿ ಗೆಲ್ಲಲು ತಿಣುಕಾಡುವ ಮೂಲಕ ತಾನು ಅಳಿವಿನಂಚಿನಲ್ಲಿರುವ ಮುನ್ಸೂಚನೆ ನೀಡಿದೆ. ಜೆಡಿಎಸ್ ಜತೆಗಿನ ಮೈತ್ರಿಯಿಂದ ಕಾಂಗ್ರೆಸ್‍ಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಹಲವಾರು ಮಂದಿ ಹಿರಿಯ ಕಾಂಗ್ರೆಸಿಗರು ಹೇಳಿದ್ದರು. ಅದನ್ನು ಕಿವಿಯ ಮೇಲೆ ಹಾಕಿಕೊಳ್ಳದೆ. ರಾಹುಲ್ ಗಾಂಧಿ ರಾಷ್ಟ್ರ ರಾಜಕಾರಣದಲ್ಲಿ ಮೈತ್ರಿಗೆ ರಾಜ್ಯ ನಾಯಕರ ಮೇಲೆ ಒತ್ತಡ ಹಾಕಿದ್ದರು.

ಅದರ ಪರಿಣಾಮ ದಕ್ಷಿಣ ಭಾರತದಲ್ಲಿ ಹಾಗೂ ಹೀಗೂ ಗುಟುಕು ಜೀವ ಹಿಡಿದು ಕೊಂಡಿದ್ದ ಕಾಂಗ್ರೆಸ್ ಕೋಮಾ ಸ್ಥಿತಿಗೆ ತಲುಪಿದೆ. ಸಮ್ಮಿಶ್ರ ಸರ್ಕಾರ ಅಸ್ಥಿತ್ವದಲ್ಲಿರುವವರೆಗೂ ಒಂದಷ್ಟು ದಿನ ಪಕ್ಷ ತನ್ನ ಇರುವಿಕೆಯ ಛಾಯೆಯನ್ನು ತೋರಿಸಬಹುದು. ಆ ನಂತರ ಬಹುಶಃ ಕಾಂಗ್ರೆಸ್ ಕೇವಲ ನಾಯಕರ ಪಕ್ಷವಾಗಿ ಉಳಿದುಕೊಳ್ಳುವ ಸಾಧ್ಯತೆಯಿದೆ.

ಘಟಾನುಘಟಿ ನಾಯಕರು ತಾ ಮುಂದು ನಾ ಮುಂದು ಎಂದು ಗೆಲುವಿನ ಕೀರ್ತಿ ಶಿಖರವನ್ನು ಹೊತ್ತುಕೊಳ್ಳಲು ಮುಂದೆ ಬರುತ್ತಿದ್ದರು. 2013ರ ವಿಧಾನ ಸಭಾ ಚುನಾವಣೆಯ ಹೊರೆಯನ್ನು ಒಬ್ಬ ವ್ಯಕ್ತಿಯ ಹೆಗಲ ಮೇಲೆ ಹೊರೆಸಿದ ಕಾಂಗ್ರೆಸ್ ಹೈಕಮಾಂಡ್ ಪಕ್ಷದ ಅವನತಿಗೆ ನಾಂದಿ ಹಾಡಿತ್ತು ಎಂದು ಹೇಳಲಾಗಿದೆ.

ಸೋಲು ಸದಾ ಅನಾಥವಿದ್ದಂತೆ. ರಾಜ್ಯದಲ್ಲಿನ ಕಾಂಗ್ರೆಸ್‍ನ ದುಸ್ಥಿತಿಗೆ ಜವಾಬ್ದಾರರಾಗಲು ಎಲ್ಲಾ ನಾಯಕರು ಹಿಂದೇಟು ಹಾಕುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ