ಬೆಂಗಳೂರು, ಮೇ 23-ಒಟ್ಟಾಗಿ ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ಪಣತೊಟ್ಟಿದ್ದ ಕಾಂಗ್ರೆಸ್-ಜೆಡಿಎಸ್ ದೋಸ್ತಿಗಳು ಎದುರಾಳಿ ವಿರುದ್ಧ ಹೋರಾಡಿದ್ದಕ್ಕಿಂತಲೂ ತಮ್ಮಲ್ಲೇ ಕಚ್ಚಾಡಿಕೊಂಡು ಸೋಲು ಕಂಡಿದ್ದೇ ಹೆಚ್ಚಾಗಿದೆ.
ಮಂಡ್ಯ, ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ಶಿವಮೊಗ್ಗ, ಉತ್ತರ ಕನ್ನಡ, ಬಳ್ಳಾರಿ, ಬೆಂಗಳೂರು ಕೇಂದ್ರ ಕ್ಷೇತ್ರಗಳ ಸೋಲಿಗೆ ನೇರವಾಗಿ ಕಾಂಗ್ರೆಸ್-ಜೆಡಿಎಸ್ ನಡುವಿನ ಒಳಜಗಳವೇ ಕಾರಣ ಎಂದು ಸ್ಪಷ್ಟವಾಗಿದೆ.
ಮೈಸೂರಿನಲ್ಲಿ ಕಾಂಗ್ರೆಸ್ಸಿಗರು ಕಾಂಗ್ರೆಸ್ಗೆ ವೋಟ್ ಹಾಕಿದ್ದಾರೆ, ಜೆಡಿಎಸ್ನವರು ಬಿಜೆಪಿಗೆ ವೋಟ್ ಹಾಕಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಬಹಿರಂಗವಾಗಿ ಹೇಳಿಕೆ ನೀಡಿ ದೋಸ್ತಿಗಳ ನಡುವಿನ ಜಗಳವನ್ನು ಬೀದಿಯಲ್ಲಿ ಬಹಿರಂಗಪಡಿಸಿದ್ದರು. ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದರೆ, ಮಂಡ್ಯದಲ್ಲಿ ಜೆಡಿಎಸ್ಗೆ ಪಾಠ ಕಲಿಸಬೇಕಾಗುತ್ತದೆ ಎಂದು ಮೈಸೂರಿನ ಜಿಲ್ಲಾ ಕಾಂಗ್ರೆಸ್ ನಾಯಕರು ಹೇಳಿಕೊಂಡು ತಿರುಗುತ್ತಿದ್ದರು.
ಅಂದುಕೊಂಡಂತೆ, ಹೇಳಿಕೊಂಡಂತೆ ಆ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ಅವಕಾಶಗಳಿದ್ದರೂ ದೋಸ್ತಿಗಳು ಪರಸ್ಪರ ಒಳಜಗಳದಿಂದಾಗಿಯೇ ಸೋಲು ಕಂಡಿದ್ದಾರೆ.
ಇನ್ನು ತುಮಕೂರಿನಲ್ಲೂ ಜೆಡಿಎಸ್-ಕಾಂಗ್ರೆಸ್ನ ಆಂತರಿಕ ಸಂಘರ್ಷ ದೇವೇಗೌಡರ ಸೋಲಿಗೆ ಕಾರಣವಾಗಿದೆ. ಶಿವಮೊಗ್ಗದಲ್ಲಿ ಕಳೆದ ಬಾರಿ ಅತ್ಯಂತ ಕಡಿಮೆ ಅವಧಿಯಲ್ಲೇ ಪ್ರಬಲ ಪೈಪೋಟಿ ನೀಡಿದ್ದ ಜೆಡಿಎಸ್ ಈ ಬಾರಿ ಸಾಕಷ್ಟು ಅವಕಾಶ ಇದ್ದರೂ ಅದನ್ನು ಬಳಸಿಕೊಳ್ಳಲು ವಿಫಲವಾಯಿತು. ಕಾಂಗ್ರೆಸ್ ನಾಯಕರು ಜೆಡಿಎಸ್ ಅಭ್ಯರ್ಥಿ ಮಧುಬಂಗಾರಪ್ಪ ಅವರಿಗೆ ಬೆಂಬಲ ನೀಡದೆ ಸೋಲಿಗೆ ಕಾರಣರಾದರು.
ಚಿಕ್ಕಬಳ್ಳಾಪುರ, ದಾವಣಗೆರೆ, ಚಿತ್ರದುರ್ಗ, ಕೋಲಾರ ಕ್ಷೇತ್ರಗಳಲ್ಲೂ ದೋಸ್ತಿ ಒಳಜಗಳವೇ ಗೆಲುವಿಗೆ ಮುಳುವಾಗಿತ್ತು.
ವಿಜಯಪುರ, ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ನೆಲೆ ಇಲ್ಲದಿದ್ದರೂ ಜೆಡಿಎಸ್ ಕ್ಷೇತ್ರಗಳನ್ನು ಪಡೆದುಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇಲ್ಲಿ ಯಾರನ್ನು ಕಣಕ್ಕಿಳಿಸಬೇಕೆಂದು ಗೊತ್ತಾಗದೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ನ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಕಣಕ್ಕಿಳಿಸಲಾಗಿತ್ತು. ಇನ್ನು ಉತ್ತರ ಕನ್ನಡ ಕ್ಷೇತ್ರದಲ್ಲಿ ಆನಂದ್ ಅಸ್ನೋಟಿಕರ್ ಕಣಕ್ಕಿಳಿದಿದ್ದರಾದರೂ ಈ ಇಬ್ಬರೂ ಪ್ರಬಲ ಅಭ್ಯರ್ಥಿಗಳಾಗಿರಲಿಲ್ಲ.
ಹೀಗಾಗಿ ಈ ಮೂರೂ ಕ್ಷೇತ್ರಗಳನ್ನು ದೋಸ್ತಿಗಳು ಕಳೆದುಕೊಂಡರು.