
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ರಾಜ್ಯ ಉಸ್ತುವಾರಿ ವೇಣುಗೋಪಾಲ್ ವಿರುದ್ಧ ಹೇಳಿಕೆ ಕೊಟ್ಟು ಕೈ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ಶಾಸಕ ರೋಷನ್ ಬೇಗ್ ಇದೀಗ ಮತ್ತೆ ಕಾಂಗ್ರೆಸ್ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬೇಗ್, ಹಲವು ನಾಯಕರನ್ನು ಕಾಂಗ್ರೆಸ್ ಎಟಿಎಂ ಆಗಿ ಬಳಸಿಕೊಳ್ಳುತ್ತಿದೆ. ಸಚಿವರಾದ ಡಿ.ಕೆ ಶಿವಕುಮಾರ್, ರಾಮಲಿಂಗಾರೆಡ್ಡಿ, ಎಂ.ಬಿ ಪಾಟೀಲ್, ಕೆಜೆ.ಜಾರ್ಜ್ ಸಾಕಷ್ಟು ವರ್ಷದಿಂದ ಪಕ್ಷದಲ್ಲಿದ್ದಾರೆ. ಇವರೆಲ್ಲರ ಬಗ್ಗೆ ನನಗೆ ಅಪಾರ ಗೌರವವಿದೆ. ಇವರೆಲ್ಲರೂ ಕಾಂಗ್ರೆಸ್ ಕಟ್ಟಲು ಶ್ರಮಿಸುತ್ತಿದ್ದಾರೆ. ಆದರೆ ಅವರನ್ನು ಪರ್ಸನಲ್ ಎಟಿಎಂ ರೀತಿ ಬಳಸಲಾಗುತ್ತಿದೆ ಎಂದು ರೋಷನ್ ಬೇಗ್ ಆರೋಸಿಸಿದ್ದಾರೆ.
ಆಪರೇಷನ್ ಕಮಲದ ಬಗ್ಗೆ ಕಾಂಗ್ರೆಸ್ ಟೀಕಿಸುತ್ತಿದೆ. ಆದರೆ ಸಂಪುಟದ ಪ್ರಮುಖ ಖಾತೆಗಳನ್ನು ಬಿಕರಿ ಮಾಡಲಾಗಿದೆ. ಹಣ ಪಡೆದು ಖಾತೆ ಹಂಚಿರುವ ನಾಯಕರು ಆಪರೇಷನ್ ಕಮಲದ ಬಗ್ಗೆ ಮಾತನಾಡುವುದು ಅಪಹಾಸ್ಯ ಎಂದು ಟ್ವಿಟ್ಟರ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಬೇಗ್ ಏನ್ ಹೇಳಿದ್ದರು?
ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ರೋಷನ್ ಬೇಗ್, ಸಿದ್ದರಾಮಯ್ಯ ಅಹಂಕಾರಿ, ದಿನೇಶ್ ಗುಂಡೂರಾವ್ ಫ್ಲಾಪ್ ಸ್ಟಾರ್, ಕೆಸಿ ವೇಣುಗೋಪಾಲ್ ಬಫೂನ್ ಎಂದು ಹೇಳಿಕೆ ನೀಡಿದ್ದರು.
ಲೋಕಸಭೆಯಲ್ಲಿ ನಮಗೆ ಹಿನ್ನಡೆಯಾದರೆ ರಾಜ್ಯದ ಕಾಂಗ್ರೆಸ್ ಶಾಸಕಾಂಗ ಸಭೆಯ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾರಣ. ಎಕ್ಸಿಟ್ ಪೋಲ್ ನೋಡಿದರೆ ನನಗೆ ಬೇಸರವಾಗುತ್ತದೆ ಎಂದು ಬಹಿರಂಗವಾಗಿಯೇ ರೋಷನ್ ಬೇಗ್ ಅಸಮಾಧಾನವನ್ನು ಹೊರ ಹಾಕಿದ್ದರು.