ಮೇಲುಕೋಟೆಯಲ್ಲಿ ಮೇಲುಗೈ ಸಾಧಿಸಿದರಷ್ಟೆ ನಿಖಿಲ್​ಗೆ ಒಲಿಯಲಿದೆ ಮಂಡ್ಯ; ಹೊಸ ಸಮೀಕ್ಷೆಯಲ್ಲಿ ಏನಿದೆ?

ಮಂಡ್ಯ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಹೆಚ್ಚು ಕುತೂಹಲ ಮೂಡಿಸಿದ ಕ್ಷೇತ್ರ ಎಂದರೆ ಮಂಡ್ಯ ಲೋಕಸಭೆ. ಜೆಡಿಎಸ್ ಅಭ್ಯರ್ಥಿ ನಿಖಿಲ್ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಈ ಇಬ್ಬರಲ್ಲಿ ಗೆಲ್ಲುವವರು ಯಾರು? ಎಂಬ ವಿಚಾರ ಇದೀಗ ದಿನದಿಂದ ದಿನಕ್ಕೆ ಮಹತ್ವ ಪಡೆದುಕೊಳ್ಳುತ್ತಿದೆ. ಈ ನಡುವೆ ಹೊಸ ಸಮೀಕ್ಷೆಯೊಂದು ಹೊರ ಬಿದ್ದಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಚುನಾವಣೆ ಮುಗಿದ ನಂತರ ಇಷ್ಟು ದಿನ ಮಂಡ್ಯದ 8 ವಿಧಾನಸಭಾ ಕ್ಷೇತ್ರದಲ್ಲಿ ಯಾವ ಕ್ಷೇತದಿಂದ ಯಾರಿಗೆ ಹೆಚ್ಚು ಲೀಡ್ ಸಿಗಲಿದೆ?. ಮಹಿಳಾ ಮತದಾರರು ಯಾರ ಪರ ಒಲಿದಿದ್ದಾರೆ? ಎಂಬ ಹತ್ತಾರು ವಿಚಾರಗಳ ಕುರಿತಾಗಿ ಸಾಮಾನ್ಯವಾಗಿ ಚರ್ಚೆ ನಡೆಯುತ್ತಿತ್ತು. ಅಲ್ಲದೆ ಈ ಕುರಿತು ಸಮೀಕ್ಷೆ ನಡೆಸಲು ಸ್ವತಃ ಸಿಎಂ ಕುಮಾರಸ್ವಾಮಿ ತಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ನಡುವೆ ಹೊಸದೊಂದು ಸಮೀಕ್ಷೆ ಹೊರ ಬಿದ್ದಿದ್ದು ಎಲ್ಲರ ಕಣ್ಣು ಇದೀಗ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಮೇಲೆ ಬೀಳುವಂತಾಗಿದೆ.

ಫಲಿತಾಂಶ ನಿರ್ಧರಿಸಲಿದೆಯಾ ಮೇಲುಕೋಟೆ?; ಇದೀಗ ಹೊಸದಾಗಿ ಹೊರಬಂದಿರುವ ಸಮೀಕ್ಷೆಯಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರ ಮಂಡ್ಯ ಲೋಕಸಭೆ ಫಲಿತಾಂಶವನ್ನು ನಿರ್ಧಾರ ಮಾಡಲಿದೆ. ಈ ಕ್ಷೇತ್ರದಲ್ಲಿ ಹೆಚ್ಚು ಲೀಡ್ ಪಡೆದವರು ಗೆಲ್ಲಲಿದ್ದಾರೆ ಎನ್ನಲಾಗುತ್ತಿದೆ. ಮೇಲುಕೋಟೆ ಕ್ಷೇತ್ರದಲ್ಲಿ 25 ರಿಂದ 30 ಸಾವಿರ ಲೀಡ್ ಪಡೆದರೆ ಮಾತ್ರ ನಿಖಿಲ್ ಗೆಲ್ಲಲಿದ್ದಾರೆ. ಅಕಸ್ಮಾತ್ ನಟಿ ಸುಮಲತಾ ಸಮಬಲದ ಹೋರಾಟ ನೀಡಿದರೆ ಗೆಲುವು ಸುಮಲತಾ ಪಾಲಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಜೆಡಿಎಸ್ ಅಭ್ಯರ್ಥಿ ಸಿ.ಎಸ್. ಪುಟ್ಟರಾಜು. ಮುಖ್ಯಂಮಂತ್ರಿ ಕುಮಾರಸ್ವಾಮಿಯವರ ಬಲಗೈ ಬಂಟ ಎಂದೇ ಬಿಂಬಿಸಲಾಗಿರುವ ಪುಟ್ಟರಾಜು ನೀರಾವರಿ ಸಚಿವರೂ ಹೌದು. ಈ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಗೆಲುವಿಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡತೆ ಕ್ಷೇತ್ರ ಸುತ್ತಾಡಿ ನಿಖಿಲ್ ಪರ ಪ್ರಚಾರ ನಡೆಸಿರುವ ಪುಟ್ಟರಾಜು ಈಗಾಗ್ಲೇ  ನಿಖಿಲ್ ಎರಡೂವರೆ ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ, ಇಲ್ಲಾಂದ್ರೆ ತಾನು ರಾಜಕೀಯ ನಿವೃತ್ತಿ ನೀಡುವುದಾಗಿ ಘೋಷಿಸಿದ್ದಾರೆ.

ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಗೆಲುವು ಸಾಧಿಸಿದರೆ ಸಚಿಚ ಪುಟ್ಟರಾಜು ಅವರ ರಾಜಕೀಯ ವೃದ್ಧಿಗೂ ಈ ಫಲಿತಾಂಶ ಕಾರಣವಾಗಲಿದೆ.

ಅಕಸ್ಮಾತ್ ನಿಖಿಲ್ ಸೋತರೆ ಪುಟ್ಟರಾಜು ಅವರ ಸಚಿವ ಸ್ಥಾನಕ್ಕೆ ಕುತ್ತು ಬರಲಿದೆ ಎನ್ನಲಾಗುತ್ತಿದ್ದು ಇದೇ ಕಾರಣಕ್ಕೆ ಎಲ್ಲರ ಕಣ್ಣು ಮೇಲುಕೋಟೆ ಕ್ಷೇತ್ರದ ಮೇಲೆ ನೆಟ್ಟಿದೆ. ಆದರೆ, ನಿಖರ ಫಲಿತಾಂಶಕ್ಕಾಗಿ ಮೇ.23ರ ವರೆಗೂ ಕಾಯಲೇಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ