ಬೆಂಗಳೂರು,ಮೇ 22- ನಾಳೆ ಪ್ರಕಟಗೊಳ್ಳಲಿರುವ ಲೋಕಸಭೆ ಚುನಾವಣಾ ಫಲಿತಾಂಶ ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿನ ಭವಿಷ್ಯವನ್ನು ನಿರ್ಧರಿಸಲಿದೆ.
ಮತಗಟ್ಟೆ ಸಮೀಕ್ಷೆ ಪ್ರಕಾರ ಫಲಿತಾಂಶದಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿದ ಸ್ಥಾನ ಗಳಿಸಿದರೆ ದೋಸ್ತಿ ಸರ್ಕಾರದ ಮೇಲೆ ಪರಿಣಾಮ ಬೀರುವುದರಲ್ಲಿ ಯಾವ ಅನುಮಾನವೂ ಇಲ್ಲ.
ಭಾನುವಾರ ಮತಗಟ್ಟೆ ಸಮೀಕ್ಷೆ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ನಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಕೆಲವರು ಸಮೀಕ್ಷೆಯನ್ನು ಆಂತರಿಕವಾಗಿ ಒಪ್ಪಿಕೊಂಡರೆ ಬಹಿರಂಗವಾಗಿ ವಿರೋಧಿಸುತ್ತಿದ್ದಾರೆ.
ಸಮೀಕ್ಷೆ ಹೊರಬಿದ್ದ ನಂತರ ಉಭಯ ಪಕ್ಷಗಳಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ಬೆಳಗಾವಿಯ ರಮೇಶ್ ಜಾರಕಿಹೊಳಿ ಕಾಂಗ್ರೆಸ್ಗೆ ಗುಡ್ಬೈ ಹೇಳಲು ತೀರ್ಮಾನಿಸಿದ್ದರೆ, ಇನ್ನು ನಿನ್ನೆಯಷ್ಟೇ ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮುಖಂಡ ರೋಷನ್ ಬೇಗ್ ಸಿಡಿಸಿರುವ ಬಾಂಬ್ ಕಾಂಗ್ರೆಸ್ ಪಕ್ಷವನ್ನೇ ಅಲುಗಾಡಿಸತೊಡಗಿದೆ.
ಫಲಿತಾಂಶ ಪ್ರಕಟಗೊಂಡ ಬಳಿಕ ಸಮ್ಮಿಶ್ರ ಸರ್ಕಾರದಲ್ಲಿ ಭಿನ್ನಮತ ಉಂಟಾಗಿ ಸರ್ಕಾರ ರಚನೆಗೆ ಅವಕಾಶ ಸಿಗುತ್ತದೆ ಎಂಬ ಅಪರಿಮಿತ ನಿರೀಕ್ಷೆಯಲ್ಲಿದ್ದಾರೆ ಬಿಜೆಪಿ ನಾಯಕರು.
ರಮೇಶ್ ಜಾರಕಿಹೊಳಿ, ರೋಷನ್ ಬೇಗ್ ಸೇರಿದಂತೆ ಕೆಲವು ಕಾಂಗ್ರೆಸ್ನ ಭಿನ್ನಮತೀಯ ಶಾಸಕರು ಸರ್ಕಾರದಿಂದ ಹೊರಬರುವುದಲ್ಲದೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ವಿಶ್ವಾಸವನ್ನಿಟ್ಟುಕೊಂಡಿದ್ದಾರೆ.
ಫಲಿತಾಂಶ ಏನೇ ಬಂದರೂ ಸರ್ಕಾರ ಅಸ್ಥಿರಗೊಳಿಸಲು ಅವಕಾಶ ನೀಡಬಾರದೆಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ನಾಯಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಹೀಗಾಗಿಯೇ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದು, ಮುಂದೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ದೋಸ್ತಿ ಪಕ್ಷಗಳ ಮುಖಂಡರ ಜೊತೆ ಚರ್ಚಿಸಿದ್ದಾರೆ.
ಸಮೀಕ್ಷೆಗಳಲ್ಲಿ ಬಿಜೆಪಿ ಮುಂದು:
ಭಾನುವಾರ ಪ್ರಕಟಗೊಂಡ ಬಹುತೇಕ ಸಮೀಕ್ಷೆಗಳಲ್ಲಿ ದೋಸ್ತಿ ಪಕ್ಷಗಳನ್ನು ಹಿಂದಿಕ್ಕಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಲಿದೆ ಎಂದು ಭವಿಷ್ಯ ನುಡಿದಿದೆ. ಇಂಡಿಯಾ ಟು ಡೇ ಆಕ್ಸೀಸ್ ನಡೆಸಿರುವ ಸಮೀಕ್ಷೆಯಲ್ಲಿ ಬಿಜೆಪಿ 23ರಿಂದ 25 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ.
ಬಹುತೇಕ ಸಮೀಕ್ಷೆಗಳು ಬಿಜೆಪಿ ಮೇಲುಗೈ ಸಾಧಿಸಲಿದ್ದು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಹಿನ್ನಡೆಯಾಗಲಿದೆ ಎಂದೇ ಹೇಳಿದೆ. ಅದರಲ್ಲೂ ಪ್ರತಿಷ್ಠೆಯ ಕಣವಾಗಿರುವ ಮಂಡ್ಯ, ಮೈಸೂರು-ಕೊಡಗು, ತುಮಕೂರು, ಹಾಸನ, ಚಿಕ್ಕಬಳ್ಳಾಪುರ, ಕೋಲಾರ, ಕಲಬುರಗಿ ಜಿಲ್ಲೆಯಲ್ಲಿ ದೋಸ್ತಿಪಕ್ಷಗಳ ಅಭ್ಯರ್ಥಿಗಳಿಗೆ ಹಿನ್ನಡೆಯಾದರೆ ಸರ್ಕಾರ ಏನು ಬೇಕಾದರೂ ಆಗಬಹುದೆಂಬ ಮಾತುಗಳು ಕೇಳಬರುತ್ತಿವೆ.
ಚುನಾವಣೆಗೂ ಮುನ್ನವೇ ಅನೇಕ ಕ್ಷೇತ್ರಗಳಲ್ಲಿ ದೋಸ್ತಿ ಪಕ್ಷಗಳ ನಡುವೆ ಹೊಂದಾಣಿಕೆಯಾಗದೆ ಇದ್ದದ್ದು ಕಂಡುಬಂದಿತ್ತು. ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದು ನಾಳೆ ತಿಳಿಯಲಿದೆ.