ಬೆಂಗಳೂರು,ಮೇ22- ಬೆಂಗಳೂರು ಡೈರಿ ಅಧ್ಯಕ್ಷರ ಆಯ್ಕೆಯ ಹಿನ್ನೆಲೆಯಲ್ಲಿ ನಡೆದಿರುವ ರಾಜಕಾರಣ ಕಾಂಗ್ರೆಸ್ ಶಾಸಕರನ್ನು ಕೆರಳಿಸಿದೆ.
ಒಟ್ಟು 13 ನಿರ್ದೇಶಕರ ಸಂಖ್ಯಾಬಲ ಹೊಂದಿದ್ದ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲೆಯನ್ನೊಳಗೊಂಡ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಮಾಗಡಿಯ ನರಸಿಂಹಮೂರ್ತಿ, ಕನಕಪುರದ ರಾಜ್ಕುಮಾರ್ ಆಕಾಂಕ್ಷಿಗಳಾಗಿದ್ದರು.
ಕಾಂಗ್ರೆಸ್ ಬೆಂಬಲಿತ 7 ನಿರ್ದೇಶಕರನ್ನು, ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ತಲಾ ಮೂವರು ನಿರ್ದೇಶಕರಿದ್ದಾರೆ. ಕಾಂಗ್ರೆಸ್ ಯಾರ ಬೆಂಬಲವೂ ಇಲ್ಲದೆ ಅಧ್ಯಕ್ಷ-ಉಪಾಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುವ ಸಾಮಥ್ರ್ಯ ಹೊಂದಿದ್ದರೂ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ಬಮೂಲ್(ಬೆಂಗಳೂರು ಡೈರಿ)ನಲ್ಲೂ ಮೈತ್ರಿ ರಾಜಕಾರಣ ಮುಂದುವರೆಸಲು ನಾಯಕರು ನಿರ್ಧರಿಸಿದರು.
ಅದರಂತೆ ನಿನ್ನೆ ಸಚಿವ ಕೃಷ್ಣಭೆರೇಗೌಡ ನೇತೃತ್ವದಲ್ಲಿ ಸಚಿವ ಎಂಟಿಬಿ ನಾಗರಾಜ್, ಸಂಸದರಾದ ಡಿ.ಕೆ.ಸುರೇಶ್, ವೀರಪ್ಪ ಮೊಯ್ಲಿ, ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತಿತರರು ಸಭೆ ನಡೆಸಿ ಮೈತ್ರಿಗೆ ಒಪ್ಪಿಗೆ ಸೂಚಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿತ್ತು. ಮುಖ್ಯಮಂತ್ರಿ ಕಾಂಗ್ರೆಸ್ನ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದರು.
ಬಮೂಲ್ನ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ನರಸಿಂಹಮೂರ್ತಿ ಅವರ ಆಯ್ಕೆಗೆ ನಿರ್ಧಾರವಾಗಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸುವುದಾಗಿ ಹೇಳಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಮಾಗಡಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ನಿರ್ದೇಶಕರಾಗಿದ್ದ ನರಸಿಂಹಮೂರ್ತಿ ಅವರನ್ನು ಏಕಾಏಕಿ ಅನರ್ಹಗೊಳಿಸಲಾಗಿದೆ.
2016ರಲ್ಲಿ ಜಾಹೀರಾತು ನೀಡದೆ ಕಾರ್ಯದರ್ಶಿಯನ್ನು ನೇಮಿಸಿಕೊಂಡಿದ್ದ ಆರೋಪಕ್ಕಾಗಿ ಅವರ ವಿರುದ್ಧ ವಿಚಾರಣೆ ನಡೆಯುತಿತ್ತು. ಇಷ್ಟು ದಿನ ಯಾವುದೇ ಕ್ರಮ ಕೈಗೊಳ್ಳದೆ ಚುನಾವಣೆ ನಡೆಯುವ ಹಿಂದಿನ ರಾತ್ರಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯನ್ನೇ ಅನರ್ಹಗೊಳಿಸಲಾಗಿದೆ.
ತಡರಾತ್ರಿ ಆದೇಶ ಹೊರಡಿಸಿದ ಸಹಕಾರ ಇಲಾಖೆಯ ಹಿರಿಯ ಅಧಿಕಾರಿ ಎ.ಆರ್.ರಾಜು ಅವರು ಮೊಬೈಲ್ ಸ್ವಿಚ್ ಆಫ್ ಮಾಡಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈತ್ರಿ ಧರ್ಮಕ್ಕೆ ವಿರುದ್ದವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ರೇವಣ್ಣ ನಡೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
ಮಾಗಡಿಯ ಮಾಜಿ ಶಾಸಕ ಬಾಲಕೃಷ್ಣ ಅವರ ಮೇಲಿನ ಹಗೆತನಕ್ಕಾಗಿ ಕಾಂಗ್ರೆಸ್ನ ನರಸಿಂಹಮೂರ್ತಿ ಅವರನ್ನು ಬಲಿಪಶು ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಈ ನಡುವೆ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರ ಕೈವಾಡ ಇರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. ಇಂದು ಬೆಳಗ್ಗೆ ನಗರದ ಖಾಸಗಿ ಹೋಟೆಲ್ನಲ್ಲಿ ಸಚಿವ ಕೃಷ್ಣಭೆರೇಗೌಡ ನೇತೃತ್ವದಲ್ಲಿ ಸಭೆ ನಡೆಸಿದ ಕಾಂಗ್ರೆಸ್ನ ಶಾಸಕರು, ಸಂಸದರು, ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈತ್ರಿ ಧರ್ಮಕ್ಕೆ ವಿರುದ್ಧವಾಗಿ ಡಬಲ್ ಗೇಮ್ ನಡೆಯುತ್ತಿದೆ. ನಮಗೆ ಸ್ವತಂತ್ರವಾಗಿ ಚುನಾವಣೆ ಎದುರಿಸುವ ಶಕ್ತಿ ಇದ್ದರೂ ಮೈತ್ರಿಗೆ ಒಪ್ಪಿಕೊಂಡಿದ್ದೆವು. ಅದನ್ನು ಗೌರವಿಸದೆ ಈಗ ನರಸಿಂಹಮೂರ್ತಿ ಅವರಿಗೆ ಅವಕಾಶ ತಪ್ಪಿಸಿರುವುದು ಸರಿಯಲ್ಲ ಎಂಬ ಆಕ್ಷೇಪಗಳು ಕೇಳಿಬಂದಿವೆ.
ಸ್ಪರ್ಧಾಕಾಂಕ್ಷಿ ನರಸಿಂಹಮೂರ್ತಿ ಮಾತನಾಡಿ, ಮೂರು ಬಾರಿ ತಮಗೆ ಅಧ್ಯಕ್ಷ ತಪ್ಪಿದಂತಾಗಿದೆ. ಸ್ಪರ್ಧೆಗೆ ಅವಕಾಶ ಇಲ್ಲದಂತೆ ಮಾಡಿರುವುದರ ಹಿಂದೆ ಜೆಡಿಎಸ್ನ ನಾಯಕರ ಪಾತ್ರವಿದೆ ಎಂದು ಆರೋಪಿಸಿದರು.
ಬಮೂಲ್ ಅಧ್ಯಕ್ಷ ಸ್ಥಾನಕ್ಕೆ ರಾಜ್ಕುಮಾರ್ ನಾಮಪತ್ರ :
ಇದೇ ವೇಳೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಕನಕಪುರದ ರಾಜ್ಕುಮಾರ್ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ನ ನರಸಿಂಹಮೂರ್ತಿ ಮತ್ತು ರಾಜ್ಕುಮಾರ್ ಇಬ್ಬರೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದರು. ನರಸಿಂಹಮೂರ್ತಿ ಅವರನ್ನು ರಾತ್ರೋರಾತ್ರಿ ವಜಾಗೊಳಿಸಿರುವ ಬಗ್ಗೆ ತಮಗೆ ಯಾವ ಮಾಹಿತಿಯೂ ಇಲ್ಲ. ಇದರ ಹಿಂದೆ ಯಾರ ಕೈವಾಡವಿದೆ ಎಂಬುದು ಗೊತ್ತಿಲ್ಲ ಎಂದು ಹೇಳಿದರು.
ಕಾಂಗ್ರೆಸ್ನಿಂದ ರಾಜ್ಕುಮಾರ್ ಅವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುತ್ತಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.