ನವದೆಹಲಿ, ಮೇ 22- ವಿಶ್ವಕಪ್ಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಘಟಾನುಘಟಿ ಬ್ಯಾಟ್ಸ್ಮನ್ಗಳ ರನ್ ದಾಹಕ್ಕೆ ಕಡಿವಾಣ ಹಾಕಲು ಬೌಲರ್ಗಳು ಹೊಸ ಬೌಲಿಂಗ್ ಅಸ್ತ್ರಕ್ಕೆ ಸಜ್ಜಾಗಿದ್ದಾರೆ.
ಈ ಬಾರಿಯ ವಿಶ್ವಕಪ್ ಚಾಂಪಿಯನ್ ಪಟ್ಟ ಆಲಂಕರಿಸಲು ಎಲ್ಲಾ ದೇಶಗಳು ಅಣಿಯಾಗುತ್ತಿವೆ. ವಿಶ್ವಕಪ್ ಗೆಲ್ಲುವಲ್ಲಿ ಬ್ಯಾಟ್ಸ್ಮನ್ಗಳ ಪಾತ್ರ ಮಹತ್ತರವಾದುದು, ತಮ್ಮ ತಾಯ್ನಾಡಿಗೆ ಕಪ್ ಗೆಲ್ಲಿಸಿಕೊಡಲು ಈಗಾಗಲೇ ಪ್ರಮುಖ ಬ್ಯಾಟ್ಸ್ಮನ್ಗಳು ತಯಾರಿ ನಡೆಸಿದ್ದಾರೆ.
ವಿಶ್ವಕಪ್ನ ಇತಿಹಾಸದಲ್ಲಿ ಸ್ಪಿನ್ ಬೌಲರ್ಗಿಂತ ವೇಗದ ಬೌಲರ್ಗಳೇ ಹೆಚ್ಚು ಪರಿಣಾಮಕಾರಿಯಾಗಿದ್ದು ವಿಕೆಟ್ ಕಬಳಿಸಲು ಅವರು ಬಳಸುತ್ತಿದ್ದ ಅಸ್ತ್ರ ಯಾರ್ಕರ್. ಇಂದು ಯಾರ್ಕರ್ಗೂ ಉತ್ತಮ ರೀತಿಯಲ್ಲಿ ಆಡುವುದರಿಂದ ಬೌಲರ್ಗಳು ಬೇರೆ ಬೇರೆ ಶೈಲಿಗೆ ಮೊರೆ ಹೋಗುತ್ತಿದ್ದಾರೆ.
ಇಂತಹ ಘಟಾನುಘಟಿ ಬ್ಯಾಟ್ಸ್ಮನ್ಗಳನ್ನು ಕಟ್ಟಿ ಹಾಕುವುದು ಬೌಲರ್ಗಳಿಗೆ ಕಠಿಣ ಪರೀಕ್ಷೆಯೇ ಸರಿ. ಬೌಲಿಂಗ್ನಲ್ಲಿ ಯಾವುದೇ ರೀತಿಯ ತಂತ್ರ ಅನುಸರಿಸಿದರೂ ರನ್ ದಾಹಕ್ಕೆ ಕಡಿವಾಣ ಹಾಕುವುದು ಅಸಾಧ್ಯವೇ ಸರಿ.
ಬ್ಯಾಟ್ಸ್ಮನ್ಗಳ ರನ್ದಾಹಕ್ಕೆ ಕಡಿವಾಣ ಹಾಕಲು ಪ್ರತಿತಂತ್ರ ರೂಪಿಸಿರುವ ಬೌಲರ್ಗಳು ಸ್ವಿಂಗ್, ಇನ್ಸ್ವಿಂಗ್, ಬೌನ್ಸರ್, ಯಾರ್ಕರ್, ಆಫ್- ಕಟ್ಟರ್, ಲೆಗ್- ಕಟ್ಟರ್, ವೇಗದ ಬೌಲಿಂಗ್, ಗೂಗ್ಲಿ, ಲೆಗ್ ಬ್ರೇಕ್ನಂತಹ ಬೌಲಿಂಗ್ ತಂತ್ರಕ್ಕೆ ಮೊರೆ ಹೋಗಿದ್ದಾರೆ.
ಇದುವರೆಗೂ ಬೌಲರ್ಗಳ ತಂತ್ರಕ್ಕೆ ಬ್ಯಾಟ್ಸ್ಮನ್ಗಳು ರ್ಯಾಂಪ್, ಸ್ಕೂಪ್, ದಿಲ್ಸ್ಕೂಪ್, ಸ್ವಿಚ್ ಹಿಟ್, ರಿವರ್ಸ್ ಶಾಟ್ಗಳು, ರಿವರ್ಸ್ ಸ್ವೀಪ್, ಹೆಲಿಕಾಪ್ಟರ್ ಶಾಟ್ಗಳ ಮೂಲಕ ರನ್ ಹೊಳೆಯನ್ನೇ ಹರಿಸುತ್ತಿದ್ದರು. ಇದೀಗ ಬ್ಯಾಟ್ಸ್ಮನ್ಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸಿರುವ ಬೌಲರ್ಗಳು ಹೊಸ ಪ್ರಯೋಗಕ್ಕೆ ನಾಂದಿ ಹಾಡುತ್ತಿದ್ದಾರೆ.
ಆಂಗ್ಲನಾಡಿನ ಪಿಚ್ ಈ ಬಾರಿ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಬ್ಯಾಟ್ಸ್ಮನ್ಗಳಿಗೆ ಸ್ವರ್ಗವೆಂದೇ ಬಿಂಬಿತವಾಗಿದೆ. ಚಾಲೆಂಜಿಂಗ್ ಪಿಚ್ನಲ್ಲೂ ತಮ್ಮ ಬೌಲಿಂಗ್ ಶೈಲಿಯನ್ನು ಪ್ರದರ್ಶಿಸಿ ಬ್ಯಾಟ್ಸ್ಮನ್ಗಳು ಕಕ್ಕಾಬಿಕ್ಕಿ ಮಾಡುವಂತಹ ಬೌಲರ್ಗಳು ಈ ಬಾರಿಯ ವಿಶ್ವಕಪ್ ಜಾತ್ರೆಯಲ್ಲಿದ್ದಾರೆ.
ಈ ಬಾರಿ ವಿಶ್ವಕಪ್ನಲ್ಲೂ ಹಳೇ ಯಾರ್ಕರ್ಗೆ ಆದ್ಯತೆ ನೀಡಿದರೆ ಹೆಲಿಕಾಪ್ಟರ್ ಶಾಟ್ಸ್ಗಳನ್ನು ಬಾರಿಸುವ ಭಾರತದ ಮಹೇಂದ್ರಸಿಂಗ್ ಧೋನಿ, ಹಾರ್ದಿಕ್ ಪಾಂಡ್ಯಾ, ವೆಸ್ಟ್ಇಂಡೀಸ್ನ ಆ್ಯಂಡ್ರೂ ರಸಲ್ನಂತರ ಬ್ಯಾಟ್ಸ್ಮನ್ಗಳಿಂದ ದಂಡನೆಗೆ ಒಳಗಾಗಬೇಕಾಗುತ್ತದೆ ಎಂಬ ಅರಿವಿರುವ ಬೌಲರ್ಗಳು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಅದ್ದರಿಂದ ಈ ಬಾರಿ ವೇಗದ ಬೌಲರ್ಗಳು ವೈಡ್ ಯಾರ್ಕರ್, ನಕಲ್ ಬಾಲ್, ಸ್ಲೋ ಬೌನ್ಸರ್, ಸ್ಪಿಂಟ್ ಫಿಗರ್ ಸೋಹರ್ ಬಾಲ್, ಕ್ಯಾರಮ್ಬಾಲ್, ರೌಂಡ್ ಆರ್ಮ್ ಬಾಲ್, ಇಂಡೆಕ್ಸ್ ಫಿಂಗರ್ ಸ್ವಿಮ್ ಆಫ್, ಸ್ಲೋ ಯಾರ್ಕರ್, ಬ್ಯಾಕ್ ಆಫ್ ದಿ ಸ್ಲೋಹರ್ ಬಾಲ್, ದಿ ಸ್ಲೈಡರ್ ಬೌಲಿಂಗ್ ಶೈಲಿಯಲ್ಲಿ ಬೌಲಿಂಗ್ ಮಾಡಲು ಬೌಲರುಗಳು ಕಾರ್ಯತಂತ್ರ ರೂಪಿಸಿದ್ದಾರೆ.
ನೋಡಲು ವೈಡ್ ರೀತಿಯ ಬಾಲ್ ಎಂದೆನಿಸಿದರೂ ಬ್ಯಾಟ್ಸ್ಮನ್ಗಳನ್ನು ವಂಚಿಸಿ ವಿಕೆಟ್ ಕಬಳಿಸುವ ಚಾಣಾಕ್ಯ ಬೌಲಿಂಗ್ ಇದಾಗಿದೆ. ಈ ರೀತಿಯ ಬೌಲಿಂಗ್ ಮಾಡುವುದರಲ್ಲಿ ಶ್ರೀಲಂಕಾದ ಲಸಿತ್ ಮಾಲಿಂಗ ನಿಸ್ಸೀಮರಾಗಿರುವುದಕ್ಕೆ ಮುಂಬೈ ಇಂಡಿಯನ್ಸ್ ಐಪಿಎಲ್ ಚಾಂಪಿಯನ್ಸ್ ಪಟ್ಟಕ್ಕೇರಿತು.
ಮಾಲಿಂಗರಂತೆ ಭಾರತದ ಮೊಹಮ್ಮದ್ ಶಮಿ, ದಕ್ಷಿಣ ಆಫ್ರಿಕಾದ ಡೇನ್ಸ್ಟೇನ್ರಂತಹ ಬೌಲರ್ಗಳು ಈ ರೀತಿ ಬೌಲಿಂಗ್ ಮಾಡುವಲ್ಲಿ ನಿಸ್ಸೀಮರು.
ಈ ರೀತಿಯ ಬೌಲಿಂಗ್ ಅನ್ನು ಮೊದಲು ಪ್ರದರ್ಶಿಸಿದ್ದು ಭಾರತದ ವೇಗಿ ಜಹೀರ್ಖಾನ್. ಮಧ್ಯದ ಎರಡು ಬೆರಳುಗಳ ಸಹಾಯದಿಂದ ಬೌಲ್ ಮಾಡಿ ಬ್ಯಾಟ್ಸ್ಮನ್ಗಳ ಊಹೆಯನ್ನೂ ತಲೆಕೆಳಕಾಗಿ ಮಾಡುವ ರೀತಿಯದ್ದಾಗಿದೆ. ಈಗ ಭಾರತದ ಭುವನೇಶ್ವರ್ಕುಮಾರ್ ಈ ರೀತಿಯ ಬೌಲಿಂಗ್ ಮಾಡುವಲ್ಲಿ ನಿಸ್ಸೀಮರಾಗಿದ್ದು ಆಂಗ್ಲರ ನಾಡಿನಲ್ಲಿ ನಕಲ್ ಬಾಲ್ನ ನೆರವಿನಿಂದ ಎದುರಾಳಿ ಬ್ಯಾಟ್ಸ್ಮನ್ಗಳನ್ನು ದಬ್ಬಿಬ್ಬು ಮಾಡಲು ಹೊರಟಿದ್ದಾರೆ.
ಅದೇ ರೀತಿ ಆಸ್ಟ್ರೇಲಿಯಾದ ವೇಗದ ಬೌಲರ್ ಸೋಲ್ ಬೌನ್ಸರ್ ಮಾಡುವಲ್ಲಿ ಪ್ರವೀಣರಾಗಿದ್ದರೆ, ಆಸ್ಟ್ರೇಲಿಯಾದ ವೇಗದ ಬೌಲರ್ ಮೆಕ್ಗ್ರಾತ್ ಮಾಡುತ್ತಿದ್ದ ಸ್ಪಿಟ್ ಫಿಂಗರ್ ಸ್ಲೋಹರ್ ಬಾಲ್ ಶೈಲಿಯನ್ನು ಅನುಸರಿಸುತ್ತಿರುವ ಇಂಗ್ಲೆಂಡ್ನ ಟಾಮ್ ಕೂರಿನ್ ಐಪಿಎಲ್ನಲ್ಲಿ ಈ ಶೈಲಿಯ ಬೌಲಿಂಗ್ನಿಂದ ಹ್ಯಾಟ್ರಿಕ್ ಸಾಧಿಸಿದ್ದು ಈಗ ವಿಶ್ವಕಪ್ನಲ್ಲೂ ಅದೇ ರೀತಿಯ ಬೌಲಿಂಗ್ ಶೈಲಿಯನ್ನು ಮಾಡಲು ಹೊರಟಿದ್ದಾರೆ.
ಶ್ರೀಲಂಕಾದ ಮೆಹಾರೂಫ್ ಪರಿಚಯಿಸಿದ ಕ್ಯಾರಾಮ್ ಬಾಲ್ ಬೌಲಿಂಗ್ ಶೈಲಿಯನ್ನು ಅನುಸರಿಸುತ್ತಿರುವ ಆಫ್ಘಾನಿಸ್ತಾನದ ಮುಜೀಬ್ ಉಲ್ ರೆಹಮಾನ್, ರೌಂಡ್ ಆರ್ಮ್ ಶೈಲಿಯಲ್ಲಿ ಬೌಲಿಂಗ್ ಮಾಡುವ ಭಾರತದ ಅರೆಕಾಲಿಕ ಬೌಲರ್ ಕೇದಾರ್ಜಾಧವ್, ಇಂಡೆಕ್ಸ್ ಫಿಂಗರ್ ವೇಗದ ಬೌಲಿಂಗ್ ಮಾಡುವ ಪಾಕಿಸ್ತಾನದ ಇಮಾದ್ ವಾಸಿಮ್, ಸ್ಲೋ ಯಾರ್ಕರ್ ಶೈಲಿಯಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿ ನಂಬರ್ 1 ಬೌಲರ್ ಎನಿಸಿಕೊಂಡಿರುವ ಜಸ್ಪ್ರೀತ್ ಬೂಮ್ರಾ, ಬ್ಯಾಕ್ ಆಫ್ ಹ್ಯಾಂಡ್ ಸ್ಲೋಯರ್ ಬಾಲ್ ಶೈಲಿಯ ಬೌಲಿಂಗ್ ನಿಪುಣ ವೆಸ್ಟ್ಇಂಡೀಸ್ನ ಡ್ವೇನ್ ಬ್ರಾವೋ, ಸ್ಲೈಡರ್ ಬೌಲಿಂಗ್ ಮಾಡುವ ಭಾರತದ ಯಜುವೇಂದ್ರ ಚಹಾಲ್ ಕೂಡ ಎದುರಾಳಿ ಬ್ಯಾಟ್ಸ್ಮನ್ಗಳ ರನ್ ದಾಹಕ್ಕೆ ಬ್ರೇಕ್ ಹಾಕುವ ಬೌಲರ್ಗಳಾಗಿದ್ದಾರೆ.
ದೇಶ, ವಿದೇಶಗಳ ಪ್ರಮುಖ ಬೌಲರ್ಗಳು ಈ ಬಾರಿಯ ವಿಶ್ವಕಪ್ನಲ್ಲಿ ಪ್ರಯೋಗಿಸಲು ಮುಂದಾಗಿರುವ ಹೊಸ ಅಸ್ತ್ರಕ್ಕೆ ಬ್ಯಾಟ್ಸ್ಮನ್ಗಳು ಬಲಿಯಾಗುವವರೇ ಅಥವಾ ಬೌಲಿಂಗ್ ಸವಾಲನ್ನು ಎದುರಿಸಿ ವಿಶ್ವಕಪ್ ಗೆಲ್ಲುವಲ್ಲಿ ಬ್ಯಾಟ್ಸ್ಮನ್ಗಳೇ ಪ್ರಮುಖರು ಎಂಬುದನ್ನು ಸಾಬೀತುಪಡಿಸುವವರೇ ಎಂಬುದು ಕುತೂಹಲ ಕೆರಳಿಸಿದೆ.
ವಿಶ್ವಕಪ್ನಲ್ಲಿ ಭಾಗವಹಿಸುತ್ತಿರುವ ಪ್ರತಿ ತಂಡದಲ್ಲೂ ವಿಕೆಟ್ ಕಬಳಿಸುವ ತಂತ್ರಗಾರಿಕೆ ಇರುವಂತಹ ಬೌಲರ್ಗಳಿದ್ದಾರೆ. ಭಾರತದ ತಂಡದಲ್ಲೂ ವಿನೂತನ ಶೈಲಿಯ ಬೌಲರ್ಗಳಿರುವುದರಿಂದ ಕೊಹ್ಲಿ ಪಡೆ ಈ ಬಾರಿ ಘಟಾನುಘಟಿ ಬ್ಯಾಟ್ಸ್ಮನ್ಗಳಿಗೆ ಪೆವಿಲಿಯನ್ ಹಾದಿ ತೋರಿಸಿ ವಿಶ್ವಕಪ್ ಕಿರೀಟ ತೊಡುವುದೇ ಎಂದು ಕಾದು ನೋಡಬೇಕಾಗಿದೆ.