ನಗರದಲ್ಲಿ ಮತ ಎಣಿಕೆ ನಡೆಯುವ ಕೇಂದ್ರಗಳಲ್ಲಿ ಬಿಗಿ ಭದ್ರತೆ

ಬೆಂಗಳೂರು, ಮೇ 22-ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯುವ ಕೇಂದ್ರಗಳಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್‍ಪ್ರಸಾದ್ ತಿಳಿಸಿದರು.

ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‍ಕುಮಾರ್ ಅವರೊಂದಿಗೆ ಮತ ಎಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿದೆ. ಅದೇ ರೀತಿ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಬೆಂಗಳೂರು ಉತ್ತರ, ಎಸ್.ಎಸ್.ಎಂ.ಆರ್.ವಿ ಕಾಲೇಜಿನಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿದ್ದು, ಈ ಕೇಂದ್ರಗಳ 100 ಮೀಟರ್ ದೂರದಲ್ಲಿಯೇ ವಾಹನಗಳನ್ನು ತಡೆಯಲಾಗುತ್ತದೆ ಎಂದು ಹೇಳಿದರು.

ಅಭ್ಯರ್ಥಿಗಳು, ಏಜೆಂಟರು ತಪ್ಪದೇ ಐಡಿ ಕಾರ್ಡ್‍ಗಳನ್ನು ತರಬೇಕು. ಇಲ್ಲದಿದ್ದರೆ ಕೇಂದ್ರದೊಳಗೆ ಬಿಡಲಾಗುವುದಿಲ್ಲ. ಮೊಬೈಲ್ ಹಾಗೂ ಬ್ಯಾಗ್‍ಗಳನ್ನು ಜೊತೆಯಲ್ಲಿ ತರುವಂತಿಲ್ಲ. ಮಾಧ್ಯಮದವರನ್ನು ಬಿಟ್ಟು ಮತ್ಯಾರಿಗೂ ಮೊಬೈಲ್ ಬಳಸಲು ಅವಕಾಶವಿಲ್ಲ ಎಂದು ಹೇಳಿದರು.

ಮತ ಎಣಿಕೆ ಕೇಂದ್ರಗಳ ಬಳಿ ಅಗ್ನಿಶಾಮಕ ದಳ, ಎರಡು ಆ್ಯಂಬುಲೆನ್ಸ್, ಎರಡು ಜನರೇಟರ್ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರ ಹಾಗೂ ಕಾಲೇಜುಗಳ ಸುತ್ತಮುತ್ತ ಸಿಸಿಟಿವಿ ಅಳವಡಿಸಲಾಗಿದೆ ಎಂದರು.

ನಾಳೆ ಬೆಳಗ್ಗೆ 5 ಗಂಟೆಗೆ ಮತ ಎಣಿಕೆ ಸಿಬ್ಬಂದಿ ರಿಪೋರ್ಟ್ ಮಾಡಿಕೊಳ್ಳುವಂತೆ ಸೂಚಿಸಿದ್ದೇವೆ. ಎಂಟು ಗಂಟೆಗೆ ಪೋಸ್ಟಲ್ ಬ್ಯಾಲೆಟ್ ಕೌಂಟಿಂಗ್ ನಡೆಯುತ್ತದೆ.

ನಂತರ ವಿದ್ಯುನ್ಮಾನ ಯಂತ್ರದ ಮತ ಎಣಿಕೆ ಕಾರ್ಯ ನಡೆದು ಸುಮಾರು 12 ಗಂಟೆಯೊಳಗೆ ಮುಗಿಯಬಹುದು. ನಂತರ ಪ್ರತಿ ವಿಧಾನಸಭಾ ಕ್ಷೇತ್ರದ ವಿವಿಪ್ಯಾಟ್‍ಗಳ ಕೌಂಟಿಂಗ್ ನಡೆಸಿ ವಿದ್ಯುನ್ಮಾನ ಯಂತ್ರ ಮತ್ತು ವಿವಿ ಪ್ಯಾಟ್ ತಾಳೆ ಹಾಕಲಾಗುತ್ತದೆ ಎಂದು ಹೇಳಿದರು.

ಮತ ಎಣಿಕೆ ಕೇಂದ್ರಗಳ ಸುತ್ತ ಬ್ಯಾರಿಕೇಡ್ ಹಾಕಲಾಗಿದೆ. ಮೈಕ್‍ಗಳನ್ನು ಅಳವಡಿಸಲಾಗಿದೆ. ಎಲ್ಲೂ ಯಾವುದೇ ತೊಂದರೆಯಾಗದಂತೆ ಸಕಲ ಸಿದ್ಧತೆಯನ್ನು ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತ ಮಾಡಿದೆ ಎಂದು ಮಂಜುನಾಥ್ ಪ್ರಸಾದ್ ವಿವರಿಸಿದರು.

ಪೊಲೀಸ್ ಬಂದೋಬಸ್ತ್:
ನಗರ ಪೊಲೀಸ್ ಆಯುಕ್ತ ಸುನೀಲ್‍ಕುಮಾರ್ ಮಾತನಾಡಿ, ಮತ ಎಣಿಕೆ ಕಾರ್ಯ ನಡೆಯುವ ವೇಳೆ ಬಂದೋಬಸ್ತ್‍ಗಾಗಿ ಅಧಿಕಾರಿಗಳು ಸೇರಿದಂತೆ 2 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.

2 ಪ್ಯಾರಾ ಮಿಲಿಟರಿ ಕಂಪನಿ, 23 ಕೆಎಸ್‍ಆರ್‍ಪಿ ತುಕಡಿ ಹಾಗೂ 7 ಮಂದಿ ಡಿಸಿಪಿ, 22 ಎಸಿಪಿ, 77 ಇನ್ಸ್‍ಪೆಕ್ಟರ್, 180 ಎಸ್‍ಐ ಮತ್ತು 2 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದರು.

ಪ್ರತಿ ಕೇಂದ್ರದ 100 ಮೀಟರ್‍ಗೆ ಬೌಂಡರಿ ನಿರ್ಮಾಣ ಮಾಡಲಾಗಿದೆ. ಮಾಧ್ಯಮದವರಿಗೆ ಮೀಡಿಯಾ ರೂಂವರೆಗೆ ಮಾತ್ರ ಪ್ರವೇಶವಿರುತ್ತದೆ. ಗುರುತಿನ ಚೀಟಿ ಇದ್ದವರಿಗೆ ಮಾತ್ರ ಕೇಂದ್ರದ ಒಳಗೆ ಬಿಡಲಾಗುತ್ತದೆ ಎಂದು ಹೇಳಿದರು.

ನಾಳೆ ಬೆಳಿಗ್ಗೆ 6 ಗಂಟೆಯಿಂದ ಮೇ 24ರ ಬೆಳಗ್ಗೆ 6 ಗಂಟೆಯವರೆಗೆ 144 ಸೆಕ್ಷನ್‍ನಡಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ