ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಾಳೆ ದೆಹಲಿಗೆ

ಬೆಂಗಳೂರು, ಮೇ 20-ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದಿರುವ ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಸರ್ಕಾರವನ್ನು ಪತನಗೊಳಿಸಲು ಮತ್ತೊಂದು ಸುತ್ತಿನ ಪ್ರಯತ್ನ ನಡೆಸಿದ್ದು, ಈಗಾಗಲೇ ಕಾರ್ಯಾಚರಣೆಗಿಳಿದಿದ್ದು, ನಾಳೆ ನವದೆಹಲಿಗೆ ತೆರಳಿ ಬಿಜೆಪಿ ನಾಯಕರ ಭೇಟಿ ಮಾಡಲು ಮುಂದಾಗಿದ್ದಾರೆ.

ಇಂದು ಬೆಳಗಾವಿಯಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸುವ ಮುನ್ನ ತಮ್ಮ ಬೆಂಬಲಿಗರೊಂದಿಗೆ ಮಾತನಾಡಿರುವ ಅವರು, ಶೀಘ್ರವೇ ಸಿಹಿ ಸುದ್ದಿಯೊಂದಿಗೆ ತಮ್ಮನ್ನು ಭೇಟಿ ಮಾಡುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‍ನ ಐದಾರು ಮಂದಿ ಅತೃಪ್ತ ಶಾಸಕರ ಜತೆ ನಿರಂತರ ಸಂಪರ್ಕದಲ್ಲಿರುವ ರಮೇಶ್ ಜಾರಕಿ ಹೊಳಿ ಬಿಜೆಪಿಯ ಶಾಸಕ ಬಾಲಚಂದ್ರ ಜಾರಕಿ ಹೊಳಿ, ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಜತೆ ಪ್ರಾಥಮಿಕ ಹಂತದ ಮಾತುಕತೆ ಮುಗಿಸಿದ್ದು, ನಾಳೆ ನವದೆಹಲಿಗೆ ತೆರಳಿ ಬಿಜೆಪಿಯ ನಾಯಕರನ್ನು ಭೇಟಿ ಮಾಡುವುದು ಖಚಿತವಾಗಿದೆ.

ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ನಿನ್ನೆ ಸಮೀಕ್ಷೆಗಳು ಪ್ರಕಟಗೊಂಡಿದ್ದು, ಕೇಂದ್ರದಲ್ಲಿ ಎನ್‍ಡಿಎ ಆಡಳಿತ ಮರು ಸ್ಥಾಪನೆಯಾಗುವ ಮುನ್ಸೂಚನೆ ನೀಡಿದೆ.

ಇದು ರಮೇಶ್ ಜಾರಕಿ ಹೊಳಿ ಹಾಗೂ ಕಾಂಗ್ರೆಸ್‍ನ ಅತೃಪ್ತ ಶಾಸಕರಲ್ಲಿ ಆಶಾಭಾವನೆ ಮೂಡಿಸಿದೆ. ನಿನ್ನೆ ಸಂಜೆಯಿಂದಲೇ ಕ್ರಿಯಾಶೀಲರಾಗಿರುವ ಅತೃಪ್ತರು ಭಿನ್ನಮತೀಯ ಚಟುವಟಿಕೆಗಳನ್ನು ಆರಂಭಿಸಿದ್ದಾರೆ ಎನ್ನಲಾಗಿದೆ.

ಈವರೆಗೂ ಸಮ್ಮಿಶ್ರ ಸರ್ಕಾರದ ರಕ್ಷಣೆಗಾಗಿ ನಿಂತಿದ್ದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಅತೃಪ್ತರು ರಾಜಕೀಯ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರರು ಎಂದು ತಮ್ಮ ಆಪ್ತ ವಲಯದಲ್ಲಿ ಹೇಳಿರುವುದಾಗಿ ವದಂತಿಗಳಿವೆ.

ಸಿದ್ದರಾಮಯ್ಯ ಅವರ ಸರ್ಕಾರ ರಕ್ಷಣೆ ಪ್ರಯತ್ನ ಕೈಬಿಟ್ಟ ಬಳಿಕ ನೇರವಾಗಿ ಅಖಾಡಕ್ಕಿಳಿದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಕೆಲವು ಕಾಂಗ್ರೆಸ್‍ನ ಅತೃಪ್ತರ ಜತೆ ಮಾತುಕತೆ ನಡೆಸಿದ್ದು ಅದು ಎಷ್ಟರಮಟ್ಟಿಗೆ ಫಲ ನೀಡಲಿದೆ ಎಂಬುದು ತಿಳಿದುಬರಲಿದೆ.

ಈಗಾಗಲೇ 4-5 ಬಾರಿ ಸಮ್ಮಿಶ್ರ ಸರ್ಕಾರ ಪತನಕ್ಕೆ ಪ್ರಯತ್ನಿಸಿದ ರಮೇಶ್ ಜಾರಕಿ ಹೊಳಿ ಅತೃಪ್ತರಿಂದ ನಿರೀಕ್ಷಿತ ಬೆಂಬಲ ಸಿಗದೆ ಕೈ ಚೆಲ್ಲಿದ್ದರು.

ಆದರೆ ಈ ಬಾರಿ ಪರಿಸ್ಥಿತಿ ತಿರುಗು ಮುರುಗಾಗಿದೆ. ಕಾಂಗ್ರೆಸ್‍ನ ಶಾಸಕರು ಸಚಿವರುಗಳೇ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕೆಂಬ ಹೇಳಿಕೆಗಳು ಹಾಗೂ ಜೆಡಿಎಸ್ ನಾಯಕರು ಅದಕ್ಕೆ ಪ್ರತಿ ಹೇಳಿಕೆಗಳು ನೀಡಿದ್ದು ರಾಜಕೀಯ ವಾತಾವರಣ ಹದಗೆಡಿಸಿವೆ.

ಲೋಕಸಭೆ ಫಲಿತಾಂಶದ ಬಳಿಕ ಅತೃಪ್ತರ ಸಿಟ್ಟು ಮತ್ತಷ್ಟು ಹೆಚ್ಚಾಗಲಿದ್ದು ಅದರ ಲಾಭ ಪಡೆಯಲು ರಮೇಶ್ ಜಾರಕಿ ಹೊಳಿ ಬಣ ಮುಂದಾಗಿದೆ.

ಇಡೀ ರಾಜಕಾರಣದ ಬೆಳವಣಿಗೆಯ ಹಾದಿಯಲ್ಲಿ ರಮೇಶ್ ಜಾರಕಿ ಹೊಳಿ ಅಖಾಡಕ್ಕಿಳಿದಿದ್ದಾರೆ.ಬಿಜೆಪಿ ನಾಯಕರನ್ನು ನೇರವಾಗಿ ಭೇಟಿ ಮಾಡದೆ ಮೊದಲು ಅತೃಪ್ತರನ್ನು ಕ್ರೋಢೀಕರಿಸಿ ನಂತರ ರಾಜೀನಾಮೆ ನೀಡಿ ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಎಕ್ಸಿಟ್ ಪೋಲ್‍ಗಳ ಸಮೀಕ್ಷೆಯಂತೆ ಮೈತ್ರಿ ಸರ್ಕಾರಕ್ಕೆ 7-8 ಸ್ಥಾನಗಳಷ್ಟೆ ದಕ್ಕಿದರೆ ಮೈತ್ರಿ ಸರ್ಕಾರ ನೈತಿಕವಾಗಿ ಅಧಿಕಾರದಲ್ಲಿ ಮುಂದುವರೆಯಬೇಕೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಎಲ್ಲಾ ಅವಕಾಶಗಳು ರಮೇಶ್ ಜಾರಕಿ ಹೊಳಿ ತಂಡಕ್ಕೆ ಆನೆ ಬಲ ತಂದುಕೊಟ್ಟಿದ್ದು, ಮೇ 23ರ ಒಳಗಾಗಿ ನೂತನ ಸರ್ಕಾರ ರಚನೆ ವೇದಿಕೆ ಸಿದ್ಧ ಮಾಡಲು ದಾಪುಗಾಲಿಡಲು ಸಿದ್ಧವಾಗಿದ್ದಾರೆ.

ಈವರೆಗೆ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಕಾಂಗ್ರೆಸ್‍ನ ಟ್ರಬಲ್‍ಶೂಟರ್ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಎಐಸಿಸಿ ಪ್ರಧಾನಕಾರ್ಯದರ್ಶಿ ವೇಣುಗೋಪಾಲ್ ಅವರು ಮುಂದೆ ತೆಗೆದುಕೊಳ್ಳುವ ನಿರ್ಧಾರ ಮತ್ತು ನಡೆಸುವ ಕಾರ್ಯಾಚರಣೆ ಸಮ್ಮಿಶ್ರ ಸರ್ಕಾರದ ಅಳಿವು ಉಳಿವನ್ನು ನಿರ್ಧರಿಸಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ