ಚುನಾವಣಾ ಫಲಿತಾಂಶದ ಬಗ್ಗೆ ತಲೆ ಕಡಿಸಿಕೊಳ್ಳಬೇಡಿ

ಬೆಂಗಳೂರು, ಮೇ 20-ಲೋಕಸಭೆ ಚುನಾವಣೆ ಫಲಿತಾಂಶ ಏನೇ ಬಂದರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸಮ್ಮಿಶ್ರ ಸರ್ಕಾರವನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕೆಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಕಟ್ಟಪ್ಪಣೆ ಮಾಡಿದ್ದಾರೆ.

ನಿನ್ನೆ ನವದೆಹಲಿಯಲ್ಲಿ ನಡೆದಿರುವ ಸಭೆಯಲ್ಲಿ ರಾಹುಲ್‍ಗಾಂಧಿಯವರು ರಾಜ್ಯ ನಾಯಕರಿಗೆ ಎಚ್ಚರಿಕೆಯ ಧಾಟಿಯಲ್ಲಿ ಸೂಚನೆ ನೀಡಿದ್ದು, ವೈಯಕ್ತಿಕ ಹಿತಾಸಕ್ತಿಗಾಗಿ ಸಮ್ಮಿಶ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದರೆ ನಿಮ್ಮ ಮೇಲಿನ ವಿಶ್ವಾಸ ಕಳೆದುಕೊಂಡು ಶಿಸ್ತು ಕ್ರಮ ಕೈಗೊಳ್ಳಬೇಕಾದೀತು ಎಂಬ ಎಚ್ಚರಿಕೆ ರವಾನಿಸಿದ್ದಾರೆ.

ಕಾಂಗ್ರೆಸ್ ಪಕ್ಷ ದಕ್ಷಿಣ ಭಾರತದ ಪೈಕಿ ಕರ್ನಾಟಕದಲ್ಲಿ ಮಾತ್ರ ಪ್ರಬಲವಾಗಿದೆ. ಅಲ್ಲಿ ಅಧಿಕಾರ ಕಳೆದುಕೊಳ್ಳುವುದು ತಮಗೆ ಇಷ್ಟವಿಲ್ಲ. ಈಗಾಗಲೇ ಮಿತ್ರ ಪಕ್ಷಗಳ ನಡುವಿನ ವಾಕ್ಸಮರದಿಂದ ವಾತಾವರಣ ಹದಗೆಟ್ಟಿರುವುದು ಗಮನಕ್ಕೆ ಬಂದಿದೆ.

ರಾಜ್ಯ ನಾಯಕರು ಮಧ್ಯ ಪ್ರವೇಶ ಮಾಡಿ ವಾತಾವರಣ ತಿಳಿಗೊಳಿಸಬೇಕು. ಲೋಕಸಭೆ ಚುನಾವಣೆ ಬಳಿಕ ಸಮನ್ವಯ ಸಮಿತಿ ಸಭೆ ನಡೆಸಿ ಗೊಂದಲಕ್ಕೆ ಕಾರಣವಾದ ವಿಷಯಗಳನ್ನು ಚರ್ಚೆ ಮಾಡಿ ಬಗೆಹರಿಸಬೇಕು.

ಪರಿಸ್ಥಿತಿ ಇನ್ನಷ್ಟು ಹದಗೆಡಲು ಬಿಟ್ಟರೆ ಸಮ್ಮಿಶ್ರ ಸರ್ಕಾರ ಅತಂತ್ರಕ್ಕೆ ಸಿಲುಕುತ್ತದೆ.ಅದಕ್ಕೆ ಯಾರೇ ಕಾರಣರಾದರೂ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು.

ರಾಷ್ಟ್ರ ರಾಜಕಾರಣದಲ್ಲಿ ಮಹಾಘಟಬಂಧನ್‍ನಿಂದ ಒಟ್ಟಾಗಿರುವುದು ಬಹಳ ಮುಖ್ಯವಾಗಿದೆ. ಹಾಗಾಗಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿರಲೇಬೇಕು ಎಂದು ರಾಹುಲ್‍ಗಾಂಧಿ ಸೂಚನೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ಜೆಡಿಎಸ್ ಜತೆಗಿನ ಮೈತ್ರಿಯಿಂದಾಗಿ ಕಾಂಗ್ರೆಸ್‍ಗೆ ಸಾಕಷ್ಟು ಹಾನಿಯಾಗಿದೆ. ಲೋಕಸಭೆ ಚುನಾವಣೆಯು ಹಿನ್ನಡೆಯಾಗಿದೆ. ಮುಂದಿನ ದಿನಗಳಲ್ಲಿ ಮೈತ್ರಿ ಮುಂದುವರೆಸಿದರೆ ಆಡಳಿತ ವಿರೋಧಿ ಅಲೆ ತಗುಲಲಿದೆ.ಮುಂದಿನ ಚುನಾವಣೆಯಲ್ಲಿ ನಾವು ಮತ್ತೆ ಸೋಲಬೇಕಾಗುತ್ತದೆ.

ಸಮ್ಮಿಶ್ರ ಸರ್ಕಾರ 5 ವರ್ಷ, ಮುಂದಿನ ಚುನಾವಣೆ 5 ವರ್ಷ, ಎರಡೂ ಸೇರಿ 10 ವರ್ಷ ಕಾಂಗ್ರೆಸ್ ಅಧಿಕಾರದಿಂದ ದೂರವಿರಬೇಕಾಗುತ್ತದೆ. ಈಗಲೇ ಮೈತ್ರಿಯಿಂದ ಹೊರಬಂದರೆ ಜೆಡಿಎಸ್-ಬಿಜೆಪಿ ಒಟ್ಟಾಗಿ ಸರ್ಕಾರ ರಚಿಸುತ್ತವೆ. ಆ ಮೈತ್ರಿಕೂಟವೂ ಒಂದೂವರೆ ವರ್ಷ ಆಡಳಿತ ನಡೆಸಲು ಸಾಧ್ಯವಾಗುವುದಿಲ್ಲ. ಬಿಜೆಪಿ ಸರ್ಕಾರ ರಚನೆ ಮಾಡಿದರೆ ಉತ್ತಮ ಆಡಳಿತ ಅವರಿಂದ ಸಾಧ್ಯವಿಲ್ಲ. ಹಾಗಾಗಿ ಕಡಿಮೆ ಅವಧಿಯಲ್ಲಿ ಸರ್ಕಾರ ಪತನವಾಗುತ್ತದೆ. ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಾಗಲಿದೆ ಎಂಬ ಈ ವಾದವನ್ನು ರಾಹುಲ್‍ಗಾಂಧಿ ಅಲ್ಲಗಳೆದಿದ್ದು, ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಅವಕಾಶ ನೀಡದಿರಲು ಕಾಂಗ್ರೆಸ್‍ನ ರಾಜ್ಯ ನಾಯಕರಿಗೆ ತಾಕೀತು ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ