ಬೆಂಗಳೂರು, ಮೇ 20- ಚುನಾವಣೋತ್ತರ ಸಮೀಕ್ಷೆಯಲ್ಲಿ ದೋಸ್ತಿ ಪಕ್ಷಗಳನ್ನು ಹಿಮ್ಮೆಟ್ಟಿಸಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿರುವ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ಆರಂಭಗೊಂಡಿದ್ದು, ಎಲ್ಲಾ ಶಾಸಕರ ಮೇಲೆ ಹದ್ದಿನ ಕಣ್ಣಿಡಲಾಗಿದೆ.
ಗುರುವಾರ ಫಲಿತಾಂಶ ಪ್ರಕಟಗೊಂಡ ಬಳಿಕ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಶುಕ್ರವಾರ ಶಾಸಕರು, ನೂತನವಾಗಿ ಆಯ್ಕೆಯಾಗುವ ಸಂಸದರು, ವಿಧಾನಪರಿಷತ್ ಸದಸ್ಯರು, ಜಿಲ್ಲಾಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳ ಜತೆ ಮಹತ್ವದ ಸಭೆ ನಡೆಸಲಿದ್ದಾರೆ.
ಈ ಹಿಂದೆ ನಿಗದಿಯಾದಂತೆ ನಾಳೆ ಪಕ್ಷದ ಕಚೇರಿಯಲ್ಲಿ ಸಭೆ ನಡೆಯಬೇಕಿತ್ತು.ಆದರೆ, ಫಲಿತಾಂಶದ ನಂತರವೇ ಸಭೆ ನಡೆಸಬೇಕೆಂಬ ಬಹುತೇಕರ ಒತ್ತಾಯದಂತೆ ಸಭೆಯನ್ನು ಮುಂದೂಡಲಾಗಿದೆ.
ನಿನ್ನೆ ಪ್ರಕಟಗೊಂಡ ಚುನಾವಣೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳಿಗಿಂತಲೂ ಬಿಜೆಪಿ ಹೆಚ್ಚಿನ ಸ್ಥಾನಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ.ಇದರಿಂದ ಪುಳಕಿತಗೊಂಡಿರುವ ರಾಜ್ಯ ಬಿಜೆಪಿ ನಾಯಕರು ಮುಂದೆ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದಾರೆ.
ಇದರ ಜತೆಗೆ ಮೇ 29ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದು, ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕೈಗೊಳ್ಳಬೇಕಾದ ರಣತಂತ್ರ, ಪ್ರಚಾರ, ಫಲಿತಾಂಶ ಕುರಿತಂತೆ ಸಭೆಯಲ್ಲಿ ವಿಸ್ತೃತವಾದ ಚರ್ಚೆಗಳು ನಡೆಯಲಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಚುನಾವಣೋತ್ತರ ಸಮೀಕ್ಷೆಯಂತೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 20ರಿಂದ 23 ಸ್ಥಾನಗಳನ್ನು ಪಡೆದರೆ ಸಮ್ಮಿಶ್ರ ಸರ್ಕಾರದಲ್ಲಿ ಭಾರೀ ಬದಲಾವಣೆಯಾಗುವ ಸಂಭವವಿದೆ ಎಂಬುದು ಬಿಜೆಪಿ ನಾಯಕರ ನಿರೀಕ್ಷೆ.ಆದ್ದರಿಂದ ಪ್ರತಿಷ್ಠೆಯ ಕಣವಾಗಿರುವ ಮಂಡ್ಯ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಕಲಬುರ್ಗಿ ಮತ್ತು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಪರಾಭವಗೊಂಡರೆ ರಾಜಕೀಯದಲ್ಲಿ ವಿಪ್ಲವ ಸಂಭವಿಸಬಹುದೆಂಬ ವಿಶ್ವಾಸದಲ್ಲಿ ಬಿಜೆಪಿ ನಾಯಕರು ಇದ್ದಾರೆ.
ಈಗಾಗಲೇ ರಾಜ್ಯ ಪ್ರವಾಸ ಕೈಗೊಳ್ಳಬೇಕಾಗಿದ್ದ ಬಿ.ಎಸ್.ಯಡಿಯೂರಪ್ಪ ಕಳೆದ ರಾತ್ರಿಯೇ ಬೆಂಗಳೂರಿಗೆ ಆಗಮಿಸಿದ್ದು, ಮುಂದೆ ಕೈಗೊಳ್ಳಬೇಕಾದ ಸಿದ್ದತೆಗಳ ಬಗ್ಗೆ ಕೆಲವು ಆಪ್ತ ನಾಯಕರ ಜತೆ ಮಾತುಕತೆ ನಡೆಸಲಿದ್ದಾರೆ.
ಶಾಸಕರ ಮೇಲೆ ನಿಗಾ:
ಕೆಲವು ಶಾಸಕರು ಕಾಂಗ್ರೆಸ್-ಜೆಡಿಎಸ್ ನಾಯಕರ ಜತೆ ಸಂಪರ್ಕ ಹೊಂದಿರಬಹುದೆಂಬ ಅನುಮಾನದ ಹಿನ್ನೆಲೆಯಲ್ಲಿ ಸಂದೇಹಾಸ್ಪದ ಶಾಸಕರ ನಡವಳಿಕೆ ಮೇಲೆ ಕಣ್ಣಿಡುವಂತೆ ಜಿಲ್ಲಾಧ್ಯಕ್ಷರು ಹಾಗೂ ಕೆಲವು ಮುಖಂಡರಿಗೂ ಯಡಿಯೂರಪ್ಪ ರಹಸ್ಯವಾಗಿ ಸೂಚನೆ ಕೊಟ್ಟಿದ್ದಾರೆ.
ಶಾಸಕರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟು ಯಾವ ಯಾವ ನಾಯಕರ ಜತೆ ಸಂಪರ್ಕದಲ್ಲಿದ್ದಾರೆ.ಎಲ್ಲಿಗೆ ಹೋಗಿ ಬರುತ್ತಾರೆ ಎಂಬಿತ್ಯಾದಿ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಲೆಹಾಕುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದು ರಾಜ್ಯದಲ್ಲೂ ದೊಸ್ತಿಗಳಿಗೆ ಮುಖಭಂಗವಾದರೆ ಭಿನ್ನಮತೀಯ ಶಾಸಕರು ಸರ್ಕಾರದ ವಿರುದ್ಧ ತಿರುಗಿ ಬಿದ್ದು ರಾಜೀನಾಮೆ ನೀಡುವ ಸಾಧ್ಯತೆಗಳಿವೆ. ಅಂತಹ ಪರಿಸ್ಥಿತಿ ಬಂದರೆ ಬಿಜೆಪಿಯ ಕೆಲವು ಶಾಸಕರನ್ನು ಸೆಳೆಯುವ ಸಂಭವವಿದೆ ಎಂಬ ಭೀತಿಯಿಂದ ಶಾಸಕರನ್ನು ಹಿಡಿದಿಟ್ಟಿಕೊಳ್ಳಲು ರಕ್ಷಣಾತ್ಮಕ ಕಾರ್ಯತಂತ್ರವನ್ನು ರೂಪಿಸಲಾಗಿದೆ.
ಶುಕ್ರವಾರ ನಡೆಯಲಿರುವ ಸಭೆಯಲ್ಲಿ ಮುಖ್ಯವಾಗಿ ಯಾವುದೇ ಕಾರಣಕ್ಕೂ ಶಾಸಕರು ಪಕ್ಷ ಬಿಟ್ಟು ಹೋಗಬಾರದು.ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೇ ಬರಲಿದೆ. ಕಾಂಗ್ರೆಸ್-ಜೆಡಿಎಸ್ ಏನೇ ಆಮಿಷ ಹೊಡ್ಡಿದರೂ ಅದಕ್ಕೆ ಯಾರೊಬ್ಬರೂ ಬಲಿಯಾಗಬಾರದು ಎಂದು ಯಡಿಯೂರಪ್ಪನವರು ಶಾಸಕರ ಮನವೊಲಿಕೆ ಮಾಡಲಿದ್ದಾರೆ.
ಯಾವುದೇ ಕಾರಣಕ್ಕೂ ಈ ಸರ್ಕಾರ ಅಧಿಕಾರದಲ್ಲಿ ಮುಂದುವರೆಯುವುದಿಲ್ಲ. ಈಗಾಗಲೇ ದೋಸ್ತಿ ಪಕ್ಷಗಳ ಮುಖಂಡರ ರಂಪಾಟ ಹಾದಿಬೀದಿಯಲ್ಲಿ ಶುರುವಾಗಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮೈತ್ರಿ ಮಾಡಿಕೊಂಡಿದ್ದ ದೋಸ್ತಿ ಪಕ್ಷಗಳು ಇದೀಗ ವಿಚ್ಚೇದನ ಹಾದಿ ತುಳಿಯಲಿವೆ. ಶಾಸಕರು ಆಮಿಶಕ್ಕೆ ಬಲಿಯಾಗದಂತೆ ಎಚ್ಚರ ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಯೋಗೇಶ್ವರ್ಗೆ ಹೊಣೆ:
ಫಲಿತಾಂಶದ ಬಳಿಕ ಬಿಜೆಪಿಗೆ ಸೇರಬಹುದೆಂದು ಹೇಳಲಾಗುತ್ತಿರುವ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಅವರ ಬೆಂಬಲಿಗರ ಮೇಲೆ ನಿಗಾ ವಹಿಸುವಂತೆ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ಗೆ ಬಿಎಸ್ವೈ ಸೂಚನೆ ಕೊಟ್ಟಿದ್ದಾರೆ.
ಕಳೆದ ವಾರವಷ್ಟೇ ರಮೇಶ್ ಜಾರಕಿಹೊಳಿ ಅವರನ್ನು ಯೋಗೇಶ್ವರ್ ಭೇಟಿಯಾಗಿ ಮಾತುಕತೆ ನಡೆಸಿದ್ದರು.ಗುರುವಾರದ ನಂತರ ರಾಜ್ಯ ರಾಜಕೀಯದಲ್ಲಿ ಕೆಲವು ಬೆಳವಣಿಗೆಯಾಗಬಹುದೆಂಬ ಹಿನ್ನೆಲೆಯಲ್ಲಿ ರಮೇಶ್ಜಾರಕಿಹೊಳಿ ಮತ್ತು ಅವರ ಬೆಂಬಲಿಗರ ಜತೆ ನಿರಂತರ ಸಂಪರ್ಕದಲ್ಲಿರಬೇಕೆಂದು ಯೋಗೇಶ್ವರ್ಗೆ ನಿರ್ದೇಶನ ನೀಡಲಾಗಿದೆ.