ಬೆಂಗಳೂರು, ಮೇ 17- ಲತಾ-ವಂಶಿ ಅವರ ಜನಪ್ರಿಯ ಕಾದಂಬರಿಯನ್ನು ಆಧರಿಸಿ ಹಿರಿಯ ನಾಟಕಕಾರ, ರಂಗನಟ, ನಿರ್ದೇಶಕ ಎಸ್.ವಿ.ಕೃಷ್ಣ ಶರ್ಮ ಅವರು ಬರೆದು, ರಂಗದ ಮೇಲೆ ಪ್ರದರ್ಶನ ಕಂಡು, ಕಾದಂಬರಿಯಷ್ಟೇ ಜನಪ್ರಿಯತೆಯನ್ನು ಪಡೆದುಕೊಂಡ ಯಶಸ್ವಿ ವಿಶಿಷ್ಟ ನಾಟಕ ಪೌಲಸ್ಥ್ಯನ ಪ್ರಣಯ ಕಥೆ.
ನಾಳೆ ಸಂಜೆ 7 ಗಂಟೆಗೆ (ಮೇ 18) ವಯ್ಯಾಲಿಕಾವಲ್, ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಮಾಸ್ಟರ್ ಹಿರಣ್ಣಯ್ಯ ಸ್ಮರಣಾರ್ಥ ಅಕಾಡೆಮಿ ಆಫ್ ಮ್ಯೂಸಿಕ್ ವತಿಯಿಂದ ಪೌಲಸ್ಥ್ಯ ಪ್ರಣಯ ಕಥೆ ನಾಟಕವನ್ನು ಆಯೋಜಿಸಲಾಗಿದೆ. ಪ್ರವೇಶ ಉಚಿತವಾಗಿದ್ದು, ಸಂಧ್ಯಾ ಕಲಾವಿದರು ಪೌಲಸ್ಥ್ಯನ ಪ್ರಣಯ ಕಥೆ ನಾಟಕವನ್ನು ಪ್ರದರ್ಶಿಸಲಿದ್ದಾರೆ.
ರಾವಣನ ಪಾತ್ರವೇ ನಾಟಕದ ಜೀವಾಳ. ರಾವಣನ ಬಗ್ಗೆ ವಿನೂತನ ಪರಿಕಲ್ಪನೆಯನ್ನು ಹುಟ್ಟುಹಾಕುವ ನಾಟಕ, ಅವನ ಅಂತರಂಗದ ಪದರಗಳನ್ನು ಸೂಕ್ಷ್ಮವಾಗಿ ಅಷ್ಟೇ ವಿನೂತನವಾಗಿ ಅನಾವರಣಗೊಳಿಸುವ ವಿಶಿಷ್ಟತೆಯಿಂದ ನಾಟಕ ಗಮನ ಸೆಳೆಯುತ್ತದೆ. ಪುಲಸ್ಥ್ಯ ಬ್ರಹ್ಮನ ಮೊಮ್ಮಗನಾದ ಪೌಲಸ್ಥ್ಯನ ಸುತ್ತ ಪರಿಭ್ರಮಿಸುವ ಈ ರಾಮಾಯಣದ ಕಥೆ ಹೊಸಆಯಾಮವನ್ನು ಹೊಂದಿದೆ. ಮಹಾನಾಯಕನಾಗಿ ವಿಜೃಂಭಿಸುವ ಆಧ್ಯಾತ್ಮಿಕ ಸ್ತರದ ಲಂಕೇಶ್ವರನ ವಿಶಿಷ್ಟ ಗುಣಗಳು, ಅವನ ಆಂತರ್ಯದ ಪದರಗಳು ಬಿಚ್ಚಿಕೊಳ್ಳುತ್ತ ಹೋದಂತೆ, ನಾಟಕದಲ್ಲಿ ಉಳಿದ ಪಾತ್ರಗಳೂ ಕೂಡ ಅಷ್ಟೇ ಮನೋಜ್ಞವಾಗಿ ಚಿತ್ರಿತವಾಗಿವೆ.
ನಾಟಕದ ರಚನೆ ಮತ್ತು ನಿರ್ದೇಶನದ ಜೊತೆ ರಾವಣನ ಪಾತ್ರದಲ್ಲಿ ಎಸ್.ವಿ .ಕೃಷ್ಣ ಶರ್ಮ ಅಭಿನಯಿಸುತ್ತಾರೆ. ಸಂಗೀತ ಸಂಯೋಜನೆ ಪದ್ಮಚರಣ್, ಗಾಯನ ಎಸ್.ಶಂಕರ್.