ಲೋಕಸಭೆ ಫಲಿತಾಂಶದಂದು ವಿರೋಧ ಪಕ್ಷಗಳ ಸಭೆ ಕರೆದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ

ನವ ದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶ ಮೇ.23 ರಂದು ಹೊರಬೀಳಲಿದ್ದು ಈ ಫಲಿತಾಂಶಕ್ಕಾಗಿ ಇಡೀ ರಾಷ್ಟ್ರವೇ ಕಾದು ಕುಳಿತಿದೆ. ಆದರೆ, ಅದೇ ದಿನ ದೆಹಲಿಯಲ್ಲಿ ಯುಪಿಎ ಮೈತ್ರಿಕೂಟ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳ ನಾಯಕರ ಸಭೆ ಕರೆದಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನಿರ್ಣಾಯಕ ರಾಜಕೀಯ ಆಟಕ್ಕೆ ಅಂಕಿತ ಹಾಕಿದ್ದಾರೆ ಎನ್ನಲಾಗುತ್ತಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಲಭ್ಯವಾಗುವ ಸಾಧ್ಯತೆ ಇಲ್ಲ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳುತ್ತಿದ್ದು, ಈ ನಡುವೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆದಿರುವ ಈ ಸಭೆ ರಾಷ್ಟ್ರ ರಾಜಕಾರಣಲ್ಲಿ ಎಲ್ಲಿಲ್ಲದ ಮಹತ್ವ ಪಡೆದುಕೊಂಡಿದೆ.

ಈಗಾಗಲೇ ತಮಗೆ ಆಹ್ವಾನ ಬಂದಿದ್ದು ಸೋನಿಯಾ ಗಾಂಧಿ ನೇತೃತ್ವದಲ್ಲಿ ಮೇ.23 ರಂದು ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ತಾವು ಪಾಲ್ಗೊಳ್ಳುವುದು ಖಚಿತ ಎಂದು ಗುರುವಾರ ಡಿಎಂಕೆ ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಸ್ಪಷ್ಟಪಡಿಸಿದ್ದಾರೆ. ಡಿಎಂಕೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್​ ಜೊತೆ ಮೈತ್ರಿ ಸಾಧಿಸಿದ್ದು ತಮಿಳುನಾಡಿನಲ್ಲಿ 10 ಲೋಕಸಭಾ ಸ್ಥಾನಗಳನ್ನು ಬಿಟ್ಟುಕೊಟ್ಟಿತ್ತು.

ಡಿಎಂಕೆ ಜೊತೆಗೆ ಬಿಜು ಜನತಾದಳದ ಮುಖ್ಯಸ್ಥ ನವೀನ್ ಪಟ್ನಾಯಕ್, ಟಿಡಿಪಿಯ ಚಂದ್ರಬಾಬು ನಾಯ್ಡು, ವೈಎಸ್​ಆರ್ ಕಾಂಗ್ರೆಸ್ ಪಕ್ಷದ ಜಗಮೋಹನ್​ ರೆಡ್ಡಿ, ಟಿಆರ್​ಎಸ್ ಪಕ್ಷದ ಕೆ. ಚಂದ್ರಶೇಖರ್ ರಾವ್ ಸೇರಿದಂತೆ ಬಹುತೇಕ ಎಲ್ಲಾ ಪ್ರಾದೇಶಿಕ ಪಕ್ಷಗಳ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಳ್ಳುವುದು ಖಚಿತವಾಗಿದೆ.

ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್. ರಾಜಶೇಖರ ರೆಡ್ಡಿ ಆಕಾಲಿನ ಮರಣದ ನಂತರ ತನಗೆ ಪಕ್ಷ ಮುಖ್ಯಮಂತ್ರಿ ಸ್ಥಾನ ನೀಡಲಿಲ್ಲ ಎಂದು ಹೊರ ನಡೆದಿದ್ದ ಅವರ ಮಗ ವೈ.ಎಸ್​.ಜಗಮೋಹನ್​ ರೆಡ್ಡಿ ತಮ್ಮದೇ ಪಕ್ಷ ಸ್ಥಾಪಿಸಿದ್ದರು. ಅಲ್ಲದೆ ಇಂದು ಆಂಧ್ರದಲ್ಲಿ ಟಿಡಿಪಿ ಪಕ್ಷಕ್ಕೆ ಪರ್ಯಾಯ ಶಕ್ತಿಯಾಗಿ ಬೆಳೆದಿದ್ದಾರೆ. ಹೀಗಾಗಿ ಅವರು ಲೋಕಸಭೆಯಲ್ಲಿ ಕಾಂಗ್ರೆಸ್ ಪರ ಮೈತ್ರಿಯ ಭಾಗವಾಗಲಾರರು ಎಂದೇ ಊಹಿಸಲಾಗಿತ್ತು. ಆದರೆ, ಎಲ್ಲಾ ಊಹೆಯನ್ನು ಸುಳ್ಳು ಮಾಡಿರುವ ಜಗಮೋಹನ್ ರೆಡ್ಡಿ ಇದೀಗ ಕಾಂಗ್ರೆಸ್​ ಪರ ವಹಿಸಿರುವುದು ರಾಷ್ಟ್ರ ರಾಜಕಾರಣಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗಾಗಿ ಅಮೆರಿಕ ತೆರಳಿದ್ದ ಸೋನಿಯಾ ಗಾಂಧಿ ಕಳೆದ ಎರಡು ವರ್ಷಗಳಿಂದ ಸಕ್ರೀಯ ರಾಜಕಾರಣದಿಂದ ದೂರ ಉಳಿದಿದ್ದರು.

ಲೋಕಸಭಾ ಚುನಾವಣಾ ರ್ಯಾಲಿ ಹಾಗೂ ಪ್ರಚಾರ ಸಭೆಗಳಲ್ಲೂ ಅವರ​ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ, ಇದೀಗ ಫಲಿತಾಂಶಕ್ಕೆ ಕೆಲವೇ ದಿನ ಉಳಿದಿರುವಾಗ ಅವರು ಮತ್ತೆ ಸಕ್ರೀಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿರುವುದು ಕಾಂಗ್ರೆಸ್​ ಪಕ್ಷಕ್ಕೆ ವರದಾನವಾಗಲಿದೆ ಎಂದೇ ಹೇಳಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ