ಬೆಂಗಳೂರು, ಮೇ 16-ಗಾಂಧಿನಗರ, ಆರ್.ಆರ್.ನಗರ ಮತ್ತು ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿದೆ ಎನ್ನಲಾದ 1500 ಕೋಟಿ ರೂ. ಹಗರಣದಲ್ಲಿ ಭಾಗಿಯಾದ ತಪ್ಪಿತಸ್ಥರ ವಿರುದ್ಧ ಕೂಡಲೇ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಮಾಹಿತಿ ಹಕ್ಕು ಅಧ್ಯಯನ ಕೇಂದ್ರ ಆಗ್ರಹಿಸಿದೆ.
ಈ ಮೂರೂ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿದ್ದ ಅವ್ಯವಹಾರ ಕುರಿತಂತೆ ಸರ್ಕಾರ ನೇಮಿಸಿದ್ದ ನ್ಯಾಯಮೂರ್ತಿ ನಾಗಮೋಹನ್ದಾಸ್ ಅವರ ನೇತೃತ್ವದ ಸಮಿತಿ ತನಿಖಾ ವರದಿ ಸಲ್ಲಿಸಿ ಆರು ತಿಂಗಳು ಕಳೆದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಗಮನಹರಿಸಿ ಎಂದು ಅಧ್ಯಯನ ಕೇಂದ್ರದ ಅಧ್ಯಕ್ಷ ಅಮರೇಶ್ ಅವರು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ.
ಏನಿದು ಅವ್ಯವಹಾರ: ಆರ್.ಆರ್.ನಗರ, ಗಾಂಧಿನಗರ, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರಗಳಲ್ಲಿ 2008 ರಿಂದ 2011ರವರೆಗೆ ಕೈಗೊಳ್ಳಲಾಗಿದ್ದ ಅಭಿವೃದ್ಧಿ ಕಾಮಗಾರಿಯಲ್ಲಿ ಸುಮಾರು 1500 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಐಎಎಸ್ ಅಧಿಕಾರಿ ರಾಜೇಂದ್ರಕುಮಾರ್ ಕಠಾರಿಯಾ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.
ಈ ವರದಿ ಆಧರಿಸಿ ಸರ್ಕಾರ ನ್ಯಾ.ನಾಗಮೋಹನ್ದಾಸ್ ನೇತೃತ್ವದ ಸಮಿತಿ ರಚಿಸಿ ತನಿಖಾ ಹೊಣೆ ವಹಿಸಿತ್ತು. ತನಿಖೆ ನಡೆಸಿದ ಈ ಸಮಿತಿ ಮಧ್ಯಂತರ ವರದಿಯನ್ನು ಈ ಹಿಂದೆ ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರಿಗೆ ಸಲ್ಲಿಸಿತ್ತು.
ಸಂಪೂರ್ಣ ವರದಿಯನ್ನು 25-9-2018ರಂದು ಉಪಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿತ್ತು.ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿ 6 ತಿಂಗಳು ಕಳೆದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಎಡೆಮಾಡಿದೆ.ಜತೆಗೆ ಬಿಬಿಎಂಪಿಯ ಪ್ರತಿ ವಿಭಾಗದಲ್ಲೂ ಈಗಲೂ ಅವ್ಯವಹಾರ ಮುಂದುವರೆದಿದೆ. ಈ ಅವ್ಯವಹಾರಗಳಿಗೆಲ್ಲ ಕಡಿವಾಣ ಹಾಕಲು 1500 ಕೋಟಿ ಹಗರಣದಲ್ಲಿ ಭಾಗಿಯಾದ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅಮರೇಶ್ ಒತ್ತಾಯಿಸಿದ್ದಾರೆ.