ಸುಪ್ರೀಂಕೋರ್ಟ್ ತೀರ್ಪನ್ನು ಕೂಡಲೇ ರಾಜ್ಯ ಸರ್ಕಾರ ಜಾರಿಗೊಳಿಸಬೇಕು

ಬೆಂಗಳೂರು, ಮೇ 16-ಎಸ್‍ಸಿ-ಎಸ್‍ಟಿ ನೌಕರರ ಬಡ್ತಿ ಮೀಸಲಾತಿ ಕಾಯ್ದೆ 2017 ಸುಪ್ರೀಂ ನೀಡಿರುವ ಸಿಂಧುತ್ವವನ್ನು ರಾಜ್ಯ ಸರ್ಕಾರ ಈ ಕೂಡಲೇ ಅನುಷ್ಠಾನಕ್ಕೆ ತರುವಂತಹ ಕಾರ್ಯಕ್ಕೆ ಸನ್ನದ್ಧವಾಗಬೇಕು.ಇಲ್ಲದಿದ್ದಲ್ಲಿ ರಾಜ್ಯ ದಲಿತ ಸಂಘಟನೆಗಳು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಬೃಹತ್ ಆಂದೋಲನಗಳನ್ನು ನಡೆಸಲಾಗುವುದು ಎಂದು ರಾಜ್ಯ ದಲಿತ ಸಂಘಟನೆಗಳ ಒಕ್ಕೂಟ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಈ ಕೂಡಲೇ ಸುಪ್ರೀಂ ತೀರ್ಪನ್ನು ಜಾರಿಗೊಳಿಸಬೇಕು, ಇದನ್ನು ಅನುಷ್ಠಾನ ತರದೇ ಅನ್ಯಮಾರ್ಗ ಹಿಡಿದರೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ದಲಿತ ಚಳವಳಿಗಳು ಬೃಹತ್ ಹೋರಾಟ ಮಾಡಲಿವೆ ಎಂದು ಎಚ್ಚರಿಸಿದರು.

ಬಡ್ತಿ ಮೀಸಲಾತಿ ಕಾಯ್ದೆಯನ್ನು ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ಸಂಘಟನೆಗಳ ಒಕ್ಕೂಟ ಸ್ವಾಗತಿಸುತ್ತದೆ. ಆದರೆ ಈ ಬಡ್ತಿ ಮೀಸಲಾತಿಗೆ ಸಚಿವ ಹೆಚ್.ಡಿ.ರೇವಣ್ಣ ಅವರು ಪರೋಕ್ಷವಾಗಿ ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಈ ಹಿಂದೆ ಕೆಲ ರಾಜಕಾರಣಿಗಳು ಸದರಿ ಕಾಯ್ದೆಯ ಅನುಷ್ಠಾನಕ್ಕೆ ಜಾತಿವಾದಿ ಪಟ್ಟಭದ್ರ ಹಿತಾಸಕ್ತಿಗಳು ಹಲವು ರೀತಿಯ ತೊಡಕುಗಳನ್ನು ಸೃಷ್ಟಿಸಿದರು ಎಂದು ದೂರಿದರು.

ಬಡ್ತಿ ಮೀಸಲಾತಿ ಕಾನೂನು ರೂಪಿಸಿಕೊಟ್ಟು ಸಾಮಾಜಿಕ ನ್ಯಾಯಾಧೀಶರು ಪ್ರತಿಪಾದನೆಗೆ ಬದ್ಧತೆ ಪ್ರದರ್ಶಿಸಿದವರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಿಗರು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ