ಮೈಸೂರು, ಮೇ 16- ಮನಿ ಡಬ್ಲಿಂಗ್ ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸ್ ಇನ್ಸ್ ಪೆಕ್ಟರ್ ಅವರ ಬಳಿಯಿದ್ದ ಪಿಸ್ತೂಲ್ ಕಸಿದುಕೊಂಡು ಫೈರ್ ಮಾಡಲು ಮುಂದಾದ ವ್ಯಕ್ತಿಗೇ ಗುಂಡು ತಗುಲಿ ಸಾವನ್ನಪ್ಪಿರುವ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ.
ಮೃತ ವ್ಯಕ್ತಿಯ ಹೆಸರು ಸದ್ಯಕ್ಕೆ ತಿಳಿದು ಬಂದಿಲ್ಲ. ಈತ ಮುಂಬೈ ಮೂಲದವರು ಎಂದು ಹೇಳಲಾಗುತ್ತಿದ್ದು, ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಮುಂಬೈನಿಂದ ತಂಡವೊಂದು ನಗರಕ್ಕೆ ಬಂದು ವಿಜಯನಗರ ವ್ಯಾಪ್ತಿಯ ಹೆಬ್ಬಾಳ ರಿಂಗ್ ರಸ್ತೆಯ ಅಪಾರ್ಟಮೆಂಟ್ವೊಂದರಲ್ಲಿ ಮನಿ ಡಬ್ಲಿಂಗ್(ಹಣ ದುಪಟ್ಟು)ನಲ್ಲಿ ತೊಡಗಿದೆ ಎಂಬ ಮಾಹಿತಿ ಇನ್ಸ್ ಪೆಕ್ಟರ್ ಕುಮಾರ್ ಅವರಿಗೆ ಲಭಿಸಿದೆ.
ತಕ್ಷಣ ಸಿಬ್ಬಂದಿಗಳೊಂದಿಗೆ ವಿಜಯನಗರ ಠಾಣೆ ಇನ್ಸ್ ಪೆಕ್ಟರ್ ಕುಮಾರ್ ಅವರು ಇಂದು ಬೆಳಗಿನ ಜಾವ ಅಪಾರ್ಟಮೆಂಟ್ ಬಳಿ ಬರುತ್ತಿದಂತೆ ತಂಡದಲ್ಲಿದ್ದ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ. ಒಬ್ಬಾತ ಪೊಲೀಸರಿಗೆ ಸಿಕ್ಕಿ ಬಿದ್ದಾಗ ಆತ ತಕ್ಷಣ ಇನ್ಸ್ಪೆಕ್ಟರ್ ಬಳಿಯಿದ್ದ ಪಿಸ್ತೂಲ್ನ್ನು ಸಿನಿಮೀಯ ರೀತಿ ಕಸಿದುಕೊಂಡು ಫೈರ್ ಮಾಡಲು ಮುಂದಾದಾಗ ಆಕಸ್ಮಿಕವಾಗಿ ಗುಂಡು ಆತನಿಗೆ ತಗುಲಿ ಕುಸಿದು ಬಿದಿದ್ದಾನೆ.
ಈ ವೇಳೆ ಪೊಲೀಸರು ಗಾಯಾಳುವನ್ನು ಕೆ.ಆರ್.ಆಸ್ಪತ್ರೆಗೆ ಕರೆದ್ಯೊದರಾದರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಮುಂಜಾಗ್ರತ ಕ್ರಮವಾಗಿ ಕೆ.ಆರ್.ಆಸ್ಪತ್ರೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ನಗರ ಪೊಲೀಸ್ ಆಯುಕ್ತ ಬಾಲಕೃಷ್ಣ, ಡಿಸಿಪಿ ಮುತ್ತುರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮುಂಬೈನಿಂದ ಯಾವ ವ್ಯಕ್ತಿಯ ಜೊತೆ ಹಣವನ್ನು ಡಬ್ಲಿಂಗ್ ಮಾಡಲು ನಗರಕ್ಕೆ ಎಷ್ಟು ಮಂದಿ ಬಂದಿದ್ದರು ಎಂಬ ಬಗ್ಗೆ ವಿಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಾಹಿತಿ ಕಲೆ ಹಾಕುತ್ತಿದ್ದಾರೆ.
ನಗರದಾದ್ಯಂತ ಈ ಜಾಲದ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಪರಾರಿಯಾಗಿರುವ ಮೂವರಿಗಾಗಿ ತೀವ್ರ ಶೋಧ ಕೈಗೊಂಡಿದ್ದಾರೆ.