ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದು, ಈ ಹಿಂದೆ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ಸರಿಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದು ಸರಿಯಾಗಿದೆ. ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಎಂ ಸ್ಥಾನ ಮಾತ್ರವಲ್ಲ, ಅದಕ್ಕಿಂತಲೂ ಉನ್ನತ ಸ್ಥಾನದ ಅರ್ಹತೆಯಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಸಿಎಂ ಸ್ಥಾನದ ಅರ್ಹತೆಯ ಬಹಳ ಜನ ಇದ್ದಾರೆ. ಅವರಲ್ಲಿ ಹೆಚ್.ಡಿ.ರೇವಣ್ಣ ಕೂಡಾ ಒಬ್ಬರು. ಎಲ್ಲಕ್ಕೂ ಕಾಲ ಕೂಡಿ ಬರಬೇಕು ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ಸಿಎಂ ಕುಮಾರಸ್ವಾಮಿ ಉಪ ಚುನಾವಣೆ ಪ್ರಚಾರದಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಿಎಂ ಸ್ಥಾನಕ್ಕೆ ಅರ್ಹರು ಎಂದು ಸಿದ್ದರಾಮಯ್ಯ ಬೆಂಬಲಿಗರ ವಿರುದ್ಧ ಮಾತಿನ ಚಾಟಿ ಬೀಸಿದ್ದರು. ಈ ಹೇಳಿಕೆಯ ಮೂಲಕ ಸಿದ್ದರಾಮಯ್ಯ ಮತ್ತೆ ಸಿಎಂ ಕೂಗಿಗೆ ಟಾಂಗ್ ನೀಡಿದ್ದರು. ಇದೀಗ ಸಿಎಂ ಮಾತಿನೇಟಿಗೆ ಸಿದ್ದರಾಮಯ್ಯನವರು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ನಲ್ಲಿ ಹೇಗೆ ಸಿಎಂ ಸ್ಥಾನಕ್ಕಾಗಿ ಹಲವು ಆಕಾಂಕ್ಷಿಗಳಿದ್ದಾರೋ ಹಾಗೆಯೇ ಜೆಡಿಎಸ್ ನಲ್ಲಿಯೂ ಸಿಎಂ ಸ್ಥಾನಕ್ಕೆ ಹೆಚ್.ಡಿ.ರೇವಣ್ಣ ಅರ್ಹರಿದ್ದಾರೆ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಒಬ್ಬರೇ ಸಿಎಂ ಸ್ಥಾನಕ್ಕೆ ಸೂಕ್ತ ನಾಯಕ ಅಲ್ಲ ಎಂಬ ಸಂದೇಶವನ್ನು ಟ್ವೀಟ್ ಮೂಲಕ ಹೇಳಿದಂತೆ ಆಗಿದೆ ಎಂಬ ಚರ್ಚೆಗಳು ದೋಸ್ತಿ ಅಂಗಳದಲ್ಲಿ ಆರಂಭಗೊಂಡಿವೆ.