ಪ್ರಳಯಾಂತಕ ಫನಿ ಚಂಡಮಾರುತದಿಂದ 12 ಸಾವಿರ ಕೋಟಿ ನಷ್ಟ; ಕೇಂದ್ರಕ್ಕೆ ಒಡಿಶಾ ಸರ್ಕಾರ ವರದಿ

ಭುವನೇಶ್ವರ್: ಫನಿ ಚಂಡಮಾರುತದಿಂದ ರಾಜ್ಯಕ್ಕೆ ಸುಮಾರು 12 ಸಾವಿರ ಕೋಟಿ ರೂ. ನಷ್ಟವಾಗಿದೆ. 64 ಜನ ಮೃತಪಟ್ಟಿದ್ದಾರೆ, ಸುಮಾರು 5 ಲಕ್ಷಕ್ಕೂ ಹೆಚ್ಚು ಜನ ಮನೆ ಮಠ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ ಎಂದು ಒಡಿಶಾ ಸರ್ಕಾರ ಕೇಂದ್ರಕ್ಕೆ ತಾತ್ಕಾಲಿಕ ವರದಿ ಸಲ್ಲಿಸಿದೆ.

ಫನಿ ಚಂಡಮಾರುತದಿಂದ ಉಂಟಾದ ನಷ್ಟದ ಕುರಿತು ಅಂದಾಜಿಸಲು ಬುಧವಾರ ಕೇಂದ್ರ ತಂಡ ಬುಧವಾರ ಒಡಿಶಾಗೆ ಭೇಟಿ ನೀಡಿತ್ತು. ಈ ವೇಳೆ ರಾಜ್ಯ ಸರ್ಕಾರ ಕೇಂದ್ರದ ತಂಡಕ್ಕೆ 12 ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂದು ಪ್ರಾಥಮಿಕ ವರದಿ ಸಲ್ಲಿಸಿದೆ. ಅಲ್ಲದೆ ಇದು ಅಂದಾಜಿನ ನಷ್ಟದ ಪ್ರಮಾಣವಾಗಿದ್ದು, ನಷ್ಟದ ವಾಸ್ತವಿಕ ಪ್ರಮಾಣ ತಿಳಿಯಲು ಅಧಿಕಾರಿಗಳು ಶೀಘ್ರದಲ್ಲಿ ಮನೆ ಮನೆಗೂ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. ಸಮೀಕ್ಷೆಯಲ್ಲಿ ನಷ್ಟದ ಪ್ರಮಾಣ ಅಧಿಕವಾಗುವ ಸಾಧ್ಯತೆ ಇದೆ. ಸಮೀಕ್ಷೆ ಪೂರ್ಣಗೊಂಡ ಬಳಿಕ ವಿವರವಾದ ವರದಿಯನ್ನು ಸಿದ್ದಪಡಿಸಲಾಗುವುದು ಎಂದು ಒಡಿಶಾ ರಾಜ್ಯ ಸರ್ಕಾರದ ವಿಶೇಷ ಪರಿಹಾರ ಆಯುಕ್ತ ಬಿ.ಪಿ. ಸೇಠಿ ತಿಳಿಸಿದ್ದಾರೆ.

ಪ್ರಾಥಮಿಕ ವರದಿಯಲ್ಲಿ ಸರ್ಕಾರಿ ಆಸ್ತಿಗಳು ಮಾತ್ರ ಸುಮಾರು 5,175 ಕೋಟಿ ರೂ. ನಷ್ಟವಾಗಿದ್ದು, ವಿದ್ಯುತ್​ ಕ್ಷೇತ್ರದಲ್ಲಿ 1,160 ಕೋಟಿ ರೂ. ಪಂಚಾಯತ್​ ರಾಜ್ ಮತ್ತು ಕುಡಿಯುವ ನೀರು ವಿಭಾಗದಲ್ಲಿ 587 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೆ ಇದೇ ವೇಳೆ ರಾಜ್ಯ ಮತ್ತು ಕೇಂದ್ರ ವಿಪತ್ತು ನಿರ್ವಹಣಾ ಪಡೆಯ (ಎನ್​ಡಿಆರ್​ಎಫ್) ನಿಯಮಾವಳಿಗಳನ್ನು ಪರಿಷ್ಕರಿಸಲು ಕೇಂದ್ರದ ತಂಡಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ಒಡಿಶಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಎ.ಪಿ. ಫಡಿ ಮಾಹಿತಿ ನೀಡಿದ್ದಾರೆ.

ಕಡಿಮೆ ಸಾಮರ್ಥ್ಯದ ವಿದ್ಯುತ್ ಸರಬರಾಜಿನಿಂದ ಉಂಟಾದ ಹಾನಿಗೆ ಎನ್​ಡಿಆರ್​​ಎಫ್ ಮತ್ತು ಎಸ್​ಡಿಆರ್​ಎಫ್​ ನಿಯಮದ ಅಡಿಯಲ್ಲಿ ಪರಿಹಾರ ದೊರಕುತ್ತದೆ. ಆದರೆ, ಹೈಟೆನ್ಷನ್​ ವಿದ್ಯುತ್​ ಸರಬರಾಜಿನಿಂದ ಆದ ನಷ್ಟಕ್ಕೆ ಕೇಂದ್ರದಿಂದ ಯಾವುದೇ ಪರಿಹಾರ ನೀಡಲು ಅವಕಾಶವಿಲ್ಲ. ಆದ್ದರಿಂದ ಈ ಮನವಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಡಿಮೆ ಸಾಮರ್ಥ್ಯದ ವಿದ್ಯುತ್ ಸರಬರಾಜಿನಿಂದ ಉಂಟಾದ ಹಾನಿಗೆ ಎನ್​ಡಿಆರ್​​ಎಫ್ ಮತ್ತು ಎಸ್​ಡಿಆರ್​ಎಫ್​ ನಿಯಮದ ಅಡಿಯಲ್ಲಿ ಪರಿಹಾರ ದೊರಕುತ್ತದೆ.

ಆದರೆ, ಹೈಟೆನ್ಷನ್​ ವಿದ್ಯುತ್​ ಸರಬರಾಜಿನಿಂದ ಆದ ನಷ್ಟಕ್ಕೆ ಕೇಂದ್ರದಿಂದ ಯಾವುದೇ ಪರಿಹಾರ ನೀಡಲು ಅವಕಾಶವಿಲ್ಲ. ಆದ್ದರಿಂದ ಈ ಮನವಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪುರಿ ಜಿಲ್ಲೆಗಿಲ್ಲ ವಿದ್ಯುತ್​ : ಫನಿ ಚಂಡಮಾರುತದ ಒಡಿಶಾವನ್ನು ದಾಟಿ 12 ದಿನಗಳೇ ಕಳೆದಿವೆ. ಆದರೂ ಕರಾವಳಿ ಜಿಲ್ಲೆಗಳಿಗೆ ಈವರೆಗೆ ವಿದ್ಯುತ್ ವ್ಯವಸ್ಥೆ ನೀಡುವುದು ಸಾಧ್ಯವಾಗಿಲ್ಲ. ಪರಿಣಾಮ ಪುರಿ ಸೇರಿದಂತೆ ಹಲವಾರು ಜಿಲ್ಲೆಗಳು ಈಗಲೂ ಕತ್ತಲಲ್ಲೇ ಕಾಳ ಕಳೆಯುವಂತಾಗಿದೆ.

ಫನಿ ಚಂಡಮಾರುತದ ರಭಸಕ್ಕೆ ಒಡಿಶಾ ರಾಜ್ಯದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ವಿದ್ಯುತ್ ಕಂಬಗಳ ಧರೆಗುರುಳಿವೆ. ಇದನ್ನು ಸರಿಪಡಿಸಲು ಹಣ ಹಾಗೂ ನಿಪುಣ ಕೆಲಸಗಾರರ ಕೊರತೆ ಇದೆ. ಹೀಗಾಗಿ ಕೇಂದ್ರ ಸರ್ಕಾರ ಸಹಾಯ ಮಾಡಬೇಕು. ಶೀಘ್ರದಲ್ಲಿ 5 ಸಾವಿರ ನಿಪುಣ ಕೆಲಸಗಾರರನ್ನು ರಾಜ್ಯಕ್ಕೆ ಪೂರೈಕೆ ಮಾಡಬೇಕು ಎಂದು ಕಳೆದ ವಾರ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೇಂದ್ರಕ್ಕೆ ಮನವಿ ಮಾಡಿದ್ದರು.

ಒಡಿಶಾ ಮನವಿಗೆ ಎಲ್ಲಾ ರಾಜ್ಯಗಳು ಪೂರಕವಾಗಿ ಸ್ಪಂದಿಸಿದ್ದವು. ಪರಿಣಾಮ ಒಡಿಶಾದಲ್ಲಿ ಯುದ್ದೋಪಾದಿಯಲ್ಲಿ ಪರಿಹಾರ ಕಾರ್ಯಗಳು ನಡೆಯುತ್ತಿವೆ.

ಮತ್ತೆ ಎಲ್ಲಾ ಕರಾವಳಿ ಜಿಲ್ಲೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ತಜ್ಞರು ಶ್ರಮಿಸುತ್ತಿದ್ದಾರೆ. ಬಹುತೇಕ ಜಿಲ್ಲೆಗಳಿಗೆ ಈಗಾಗಲೇ ಶೇ.80 ರಷ್ಟು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಪುರಿ ಜಿಲ್ಲೆಗೆ ಮಾತ್ರ ಈವರೆಗೆ ಸಮರ್ಪಕ ವಿದ್ಯುತ್ ವ್ಯವಸ್ಥೆ ನೀಡಲು ಸಾಧ್ಯವಾಗುತ್ತಿಲ್ಲ.

ಹೀಗಾಗಿ ಪುರಿ ಜಿಲ್ಲೆಯ ಜನ ಸರ್ಕಾರದ ವಿರುದ್ಧ ರಸ್ತೆಗಿಳಿದು ಹೋರಾಟ ನಡೆಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಜಯ್​ ಸಿಂಗ್ ವಿದ್ಯುತ್ ಸಂಪರ್ಕ ದುರಸ್ಥಿತಿಗೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಶೀಘ್ರದಲ್ಲಿ ಪುರಿ ಜಿಲ್ಲೆಗೂ ವಿದ್ಯುತ್ ಸಂಪರ್ಕ ಒದಗಿಸಲಾಗುವುದು ಎಂದು ತಿಳಿಸಿದ್ಧಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ