ಬೆಂಗಳೂರು, ಮೇ 16-ಒಂದೆಡೆ ಲೋಕಸಭೆ ಮಹಾಸಮರ, ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡುವೆ ಸ್ಥಳೀಯ ಸಂಸ್ಥೆಗಳಿಗೆ ನಡೆಯಲಿರುವ ಮಿನಿ ಸಮರಕ್ಕೆ ಗ್ರಾಮೀಣ ಭಾಗದಲ್ಲಿ ನಿರಾಸಕ್ತಿ ಕಂಡುಬಂದಿದೆ.
191 ಗ್ರಾಮ ಪಂಚಾಯ್ತಿಯ 201 ಸ್ಥಾನಗಳಿಗೆ ಹಾಗೂ 8 ತಾಲೂಕು ಪಂಚಾಯ್ತಿಗಳ 10 ಕ್ಷೇತ್ರಗಳಿಗೆ, 67 ನಗರ ಸ್ಥಳೀಯ ಸಂಸ್ಥೆಗಳ 1332 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸುವ ಗಡುವು ಇಂದು ಕೊನೆಗೊಂಡಿತು.
ಗ್ರಾಮ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿಗಳಲ್ಲಿ ಅತ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.ಗ್ರಾಮ ಪಂಚಾಯ್ತಿಗಳಿಗೆ 201 ಸ್ಥಾನಗಳಿಗೆ ಕೇವಲ 137 ನಾಮಪತ್ರಗಳು ಸಲ್ಲಿಕೆಯಾಗಿವೆ.
ತಾಲೂಕು ಪಂಚಾಯ್ತಿಯ 10 ಕ್ಷೇತ್ರಗಳ ಪೈಕಿ ಬೆಂಗಳೂರು ಪೂರ್ವ ತಾಲೂಕಿನ ಕಣ್ಣೂರು ಕ್ಷೇತ್ರ,ಬೀದರ್ನ ಮರಕುಂದ ಕ್ಷೇತ್ರಕ್ಕೆ ನಾಮಪತ್ರಗಳೇ ಸಲ್ಲಿಕೆಯಾಗಿಲ್ಲ.
ಉಳಿದ 8 ಕ್ಷೇತ್ರಗಳಿಗೆ 12 ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿವೆ. ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಬಹಳಷ್ಟು ಕಡೆ ಅವಿರೋಧ ಆಯ್ಕೆಯಾಗಿರುವುದು ಇದಕ್ಕೆ ಕಾರಣ ಎಂದು ಹೇಳಲಾಗಿದೆಯಾದರೂ ಉಪಚುನಾವಣೆಗಳಾಗಿರುವುದರಿಂದ ಜನರಲ್ಲಿ ಹೆಚ್ಚು ಉತ್ಸಾಹವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅವಧಿ ಮುಗಿದಿರುವ 8 ನಗರಸಭೆ, 32 ಪುರಸಭೆ, 21 ಪಟ್ಟಣ ಪಂಚಾಯ್ತಿ ಸೇರಿ 61ನಗರಸ್ಥಳೀಯ ಸಂಸ್ಥೆಗಳಲ್ಲಿರುವ 1326 ಕ್ಷೇತ್ರಗಳಿಗೆ ನಿನ್ನೆಯವರೆಗೂ 1765 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಅದರಲ್ಲಿ ಕಾಂಗ್ರೆಸ್ನ 419, ಬಿಜೆಪಿಯ 445, ಜೆಡಿಎಸ್ನ 219 , ಪಕ್ಷೇತರರು 629 ಮಂದಿ ಅಭ್ಯರ್ಥಿಗಳಿದ್ದಾರೆ. ಇನ್ನು ವಿವಿಧ ಕಾರಣಗಳಿಗೆ ತೆರವಾಗಿರುವ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಗಳ ಪೈಕಿ ಬಿಬಿಎಂಪಿಯ ಎರಡು ವಾರ್ಡ್ಗಳಿಗೆ 16 ಮಂದಿ ಮತ್ತು ಬೆಂಗಳೂರು ನಗರಸಭೆಯ ಹೆಬ್ಬಗೋಡಿ ವಾರ್ಡ್ಗೆ 4, ತುಮಕೂರಿನ ವಾರ್ಡ್ 22ಕ್ಕೆ 5, ಬೆಳಗಾವಿಯ ಸದಲಗ ವಾರ್ಡ್ಗೆ 3 ನಾಮಪತ್ರಗಳು ಸೇರಿ ಒಟ್ಟು 28ನಾಮಪತ್ರ ಸಲ್ಲಿಕೆಯಾಗಿವೆ. ಬೆಳಗಾವಿಯ ಮುಗಳಖೋಡ ಕ್ಷೇತ್ರಕ್ಕೆ ನಿನ್ನೆಯವರೆಗೂ ಯಾವುದೇ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ.