ಭಾರಿ ಸದ್ದು ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಸಿಡಿಸಿರುವ ಬಾಂಬ್

ಬೆಂಗಳೂರು, ಮೇ 16-ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿ ಹೋಗಿದೆ ಎನ್ನುವಷ್ಟರಲ್ಲೇ ಮುಖ್ಯಮಂತ್ರಿ ಹುದ್ದೆ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟರ್‍ನಲ್ಲಿ ಸಿಡಿಸಿರುವ ಬಾಂಬ್ ಭಾರೀ ಸದ್ದು ಮಾಡಿದೆ. ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಕುಮಾರಸ್ವಾಮಿ ಕೂಡ ಎದಿರೇಟು ನೀಡಿದ್ದಾರೆ.

ಈ ಬೆಳವಣಿಗೆ ಸಮ್ಮಿಶ್ರ ಸರ್ಕಾರದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಸುನಾಮಿಗೆ ಕಾರಣವಾಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸಿವೆ.

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಮುಖ್ಯಮಂತ್ರಿಯಾಗಬೇಕಿತ್ತು ಎಂದು ನಿನ್ನೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದರು.

ಇಂದು ಬೆಳಗ್ಗೆ ಟ್ವಿಟರ್‍ನಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು, ಎಚ್.ಡಿ.ಕುಮಾರಸ್ವಾಮಿ ಹೇಳಿದ್ದು ಸರಿಯಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಸ್ಥಾನ ಮಾತ್ರವಲ್ಲದೆ, ಅದಕ್ಕಿಂತಲೂ ಉನ್ನತ ಸ್ಥಾನದ ಅರ್ಹತೆ ಇದೆ. ಕಾಂಗ್ರೆಸ್-ಜೆಡಿಎಸ್ ಪಕ್ಷಗಳಲ್ಲಿ ಸಿಎಂ ಸ್ಥಾನದ ಅರ್ಹತೆಯ ಬಹಳಷ್ಟು ಜನ ಇದ್ದಾರೆ. ಅವರಲ್ಲಿ ಎಚ್.ಡಿ.ರೇವಣ್ಣ ಕೂಡ ಒಬ್ಬರು.ಎಲ್ಲಕ್ಕೂ ಕಾಲ ಕೂಡಿ ಬರಬೇಕು ಎಂದು ಟಕ್ಕರ್ ನೀಡಿದ್ದಾರೆ.

ನಿರೀಕ್ಷೆಯಂತೆ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಕಿಚ್ಚು ಹೆಚ್ಚಿಸಿದ್ದು, ಜೆಡಿಎಸ್‍ನಲ್ಲೂ ಸಿಎಂ ಸ್ಥಾನದ ಅರ್ಹತೆ ಹೊಂದಿರುವವರು ಜನ ಬಹಳಷ್ಟಿದ್ದಾರೆ. ಅವರಲ್ಲಿ ಎಚ್.ಡಿ.ರೇವಣ್ಣ ಕೂಡ ಒಬ್ಬರು ಎಂದು ಹೇಳುವ ಮೂಲಕ ತಮ್ಮ ಒಳಬೇಗುದಿಯನ್ನು ಹೊರಹಾಕಿದ್ದಾರೆ.

ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಟ್ವೀಟರ್‍ನಲ್ಲೇ ಪ್ರತ್ಯುತ್ತರಿಸಿದ್ದು, ತಮ್ಮ ಹೇಳಿಕೆಗೆ ರಾಜಕೀಯ ಬಣ್ಣ ಕಟ್ಟಿ ಅಪಾರ್ಥ ಕಲ್ಪಿಸುವಂತೆ ವಿಶ್ಲೇಷಿಸುವುದು ಆರೋಗ್ಯಕರವಲ್ಲ ಎಂದು ಎದಿರೇಟು ನೀಡಿದ್ದಾರೆ.

ಅಷ್ಟಕ್ಕೆ ಸುಮ್ಮನಾಗದ ಕುಮಾರಸ್ವಾಮಿಯವರು ನಾಡಿನ ಹಿರಿಯ ರಾಜಕಾರಣಿ ಹಾಗೂ ಮುತ್ಸದ್ಧಿ ಮಲ್ಲಿಕಾರ್ಜುನ್ ಖರ್ಗೆ ಅವರ ಮುಖ್ಯಮಂತ್ರಿಯಾಗಬೇಕಿತ್ತು ಎಂಬ ನನ್ನ ಹೇಳಿಕೆ ಕರ್ನಾಟಕದ ಹಲವು ದಶಕಗಳ ರಾಜಕೀಯ ವಾಸ್ತವತೆಯನ್ನು ಆಧರಿಸಿದ ಮನದಾಳದ ಮಾತು. ಈ ಹೇಳಿಕೆ ಮೂಲಕ ರಾಜಕೀಯ ಲಾಭ ಪಡೆಯುವ ಕೀಳು ಅಭಿರುಚಿ ನನ್ನದಲ್ಲ. ಖರ್ಗೆಯವರದು ಪಕ್ಷ, ಜಾತಿ ಎಲ್ಲವನ್ನೂ ಮೀರಿದ ಮಹೋನ್ನತ ವ್ಯಕ್ತಿತ್ವ ಎನ್ನುವುದನ್ನು ನಾವು ಮರೆಯಬಾರದು ಎಂದು ಹೊಗಳುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಸಚಿವ ಎಂ.ಬಿ.ಪಾಟೀಲ್ ಆದಿಯಾಗಿ ಬಹಳಷ್ಟು ಮಂದಿ ಸಿದ್ದು ಬೆಂಬಲಿಗರು ಹೇಳಿಕೆ ನೀಡುತ್ತಿದ್ದರು.

ಇದು ಜೆಡಿಎಸ್ ನಾಯಕರ ಅಸಹನೆಗೆ ಕಾರಣವಾಗಿದ್ದರೆ, ಬಿಜೆಪಿ ಪಾಳಯಕ್ಕೆ ಹೊಸ ಟೀಕಾಸ್ತ್ರ ಹುಡುಕಿ ಕೊಟ್ಟಂತಾಗಿತ್ತು.

ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಟೀಕೆಗಿಂತಲೂ ಹೆಚ್ಚಾಗಿ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ಆರೋಪ-ಪ್ರತ್ಯಾರೋಪಗಳು ಮುಗಿಲು ಮುಟ್ಟಿದ್ದವು.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವಿರುದ್ಧ ನಿಂದನೆಯ ಟ್ವಿಟ್ ಮಾಡಿ ರಾಜಕೀಯ ಕೆಸರೆರಚಾಟಕ್ಕೆ ಸಿದ್ದರಾಮಯ್ಯ ಅವರೇ ನಾಂದಿ ಹಾಡಿದ್ದರು. ಆನಂತರ ಒಬ್ಬರಾದ ಮೇಲೊಬ್ಬರಂತೆ ಹೇಳಿಕೆಗಳನ್ನು ನೀಡಿ ಎರಡೂ ಪಕ್ಷಗಳ ನಡುವೆ ವಾಕ್ಸಮರ ನಡೆದಿತ್ತು. ಒಂದು ಹಂತದಲ್ಲಿ ಜೆಡಿಎಸ್ ನಾಯಕರೇ ವಾಕ್ಸಮರದಿಂದ ಹಿಂದೆ ಸರಿದು ರಾಜೀ ಸಂಧಾನದ ಮಾತನಾಡಿದ್ದರು.ಆದರೂ ಸಿದ್ದರಾಮಯ್ಯ ತಮ್ಮ ಕೋಪವನ್ನು ಕಡಿಮೆ ಮಾಡಿಕೊಂಡಂತೆ ಕಾಣಲಿಲ್ಲ.

ನಿನ್ನೆ ಚಿಂಚೋಳಿಯ ಉಪಚುನಾವಣಾ ಕಣದಲ್ಲಿ ಕುಮಾರಸ್ವಾಮಿಯವರು ಖರ್ಗೆ ಮುಖ್ಯಮಂತ್ರಿಯಾಗಬೇಕಿತ್ತು ಎಂದು ಹೇಳಿಕೆ ನೀಡಿದ್ದರಿಂದ ಮತ್ತಷ್ಟು ಕುದ್ದು ಹೋಗಿರುವ ಸಿದ್ದರಾಮಯ್ಯ ಇಂದು ಬೆಳಗ್ಗೆ ಟ್ವೀಟ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದರು. ಆರಂಭದಿಂದಲೂ ಖರ್ಗೆ ಅವರಿಗೆ ರಾಜಕೀಯ ಪೈಪೋಟಿ ನೀಡುತ್ತಲೇ ಕಾಂಗ್ರೆಸ್‍ನಲ್ಲಿ ಪ್ರಮುಖ ಹುದ್ದೆಗಳನ್ನು ಗಿಟ್ಟಿಸಿದ್ದ ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿಯರ ಹೇಳಿಕೆ ಸಹಜವಾಗಿ ಸಿಟ್ಟು ನೆತ್ತಿಗೇರಿಸಿದೆ.

ಹೀಗಾಗಿ ರೇವಣ್ಣ ಅವರಿಗೂ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ ಎಂದು ಹೇಳುವ ಮೂಲಕ ಜೆಡಿಎಸ್ ಒಳವಲಯದಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಸಮ್ಮಿಶ್ರ ಸರ್ಕಾರದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ